ನೀರಾವರಿ ಸಲಹಾ ಸಮಿತಿ ನಿರ್ಣಯ ಅವೈಜ್ಞಾನಿಕ, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಟೀಕೆ

Chamars Malipatil
ಚಾಮರಸ ಮಾಲಿಪಾಟೀಲ
Published on

ರಾಯಚೂರು: ಕೃಷ್ಣಾ ಅಚ್ಚುಕಟ್ಟು ವ್ಯಾಪ್ತಿಯ ನಾರಾಯಣಪುರ ಬಲದಂಡೆ ಇತರ ಕಾಲುವೆಗಳಿಗೆ ವಾರಬಂದಿಯಲ್ಲಿ ನೀರು ಹರಿಸುವ ನೀರಾವರಿ ಸಲಹಾ ಸಮಿತಿ ನಿರ್ಧಾರ ಅವೈಜ್ಞಾನಿಕವಾಗಿದ್ದು, ತೀರ್ಮಾನವನ್ನು ಶೀಘ್ರವೇ ಪರಿಶೀಲಿಸದಿದ್ದಲ್ಲಿ ದೇವದುರ್ಗದಲ್ಲಿ ಆ.26ರಂದು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ತಿಳಿಸಿದರು.

ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರ ಅಭಿಪ್ರಾಯ ಆಲಿಸದೆ ಏಕಪಕ್ಷೀಯವಾಗಿ ವಾರಬಂದಿ ಪ್ರಕಾರ ನೀರು ಹರಿಸಲು ನಿರ್ಧರಿಸಲಾಗಿದೆ ಎಂದರು.

ಜಲಾಶಯದಲ್ಲಿ ಒಂದು ಬೆಳೆಗೆ ಬೇಕಾಗುವಷ್ಟು ನೀರಿನ ಸಂಗ್ರಹವಿದ್ದರೂ ವಾರಬಂದಿ ನಿಗದಿಪಡಿಸಲಾಗಿದೆ. ನೀರು ಹರಿಸಿ ಬಂದ್ ಮಾಡಿ ಪುನಃ ನೀರು ಹರಿಸಿದರೆ ಕೊನೆಭಾಗದ ರೈತರಿಗೆ ನೀರು ಬಾರದೆ ಬೆಳೆಗಳು ಒಣಗಿ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ.

ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಈಗಾಗಲೇ ಭತ್ತ, ಮೆಣಸಿನಕಾಯಿ ಸಸಿ ನೆಡುವ ಕೆಲಸ ನಡೆಯುತ್ತಿದೆ. ಹತ್ತು ದಿನ ನೀರು ಹರಿಸುವುದನ್ನು ಸ್ಥಗಿತಗೊಳಿಸಿದರೆ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. 14 ದಿನ ನೀರು ಕೊಟ್ಟು 10 ದಿನ ಸ್ಥಗಿತಗೊಳಿಸಿದರೆ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಹೀಗಾಗಿ ವಾರಬಂದಿ ನಿರ್ಧಾರ ಪುನರ್ ಪರಿಶೀಲಿಸಬೇಕು ಎಂದರು.

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ, ರೈತರ ಸಮಸ್ಯೆ ತಿಳಿಯಲು ಮುಂದಾಗಲಿಲ್ಲ. ಶಾಸಕಿ ಕರೆಮ್ಮ ನಾಯಕ ಸಮಸ್ಯೆಯನ್ನು ಸಭೆ ಗಮನಕ್ಕೆ ತಂದರೂ ಸ್ಪಂದಿಸಲಿಲ್ಲ. ಜಲ ಸಂಪನ್ಮೂಲ ಸಚಿವರು ರೈತರ ಸಮಸ್ಯೆಗಳನ್ನು ಆಲಿಸಲು ಸಿದ್ಧರಿಲ್ಲ. ಕೂಡಲೇ ಅವರನ್ನು ಜಲಸಂಪನ್ಮೂಲ ಸಚಿವ ಸ್ಥಾನದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ 124 ತಾಲೂಕುಗಳಲ್ಲಿ ಬರ ಪರಿಸ್ಥಿತಿಯಿದೆ ಆದರೆ ರಾಜ್ಯ ಸರ್ಕಾರ ಬರ ಘೋಷಣೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಬರ ಘೋಷಣೆಗೆ ರೂಪಿಸಿರುವ ಮಾನದಂಡಗಳು ಬದಲಾಗಬೇಕಿದೆ. ಪ್ರದೇಶದಿಂದ ಪ್ರದೇಶಕ್ಕೆ ಬೆಳೆ ಪರಿಸ್ಥಿತಿ ಬದಲಾಗುತ್ತಿದ್ದು, ಶೇ.60 ಬೆಳೆ ಹಾನಿಯಾದರೆ ಪರಿಹಾರ ನೀಡುವುದಾಗಿ ಹೇಳುವುದು ಅವೈಜ್ಞಾನಿಕ ಕ್ರಮವಾಗಿದೆ.

ಫಸಲ್‌ಬಿಮಾ ಯೋಜನೆಯಡಿ ನಡೆದಿರುವ ಅಕ್ರಮ ತನಿಖೆಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಜಂಟಿ ನಿರ್ದೇಶಕರ ಲೋಪವೇ ಕಾರಣವಾಗಿದ್ದು, ಅವರಿಂದಲೇ ತನಿಖೆ ನಡೆಸುವುದು ಸೂಕ್ತವೇ ಎಂದು ಚಾಮರಸ ಮಾಲಿಪಾಟೀಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಪದಾಧಿಕಾರಿಗಳಾದ ಮಲ್ಲಣ್ಣ ದಿನ್ನಿ, ದೇವರಾಜ ನಾಯಕ, ಚನ್ನನಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net