

ಚನ್ನಪಟ್ಟಣ
ರಾಜ್ಯ ಸರ್ಕಾರದ ವತಿಯಿಂದ ತಾಲೂಕಿಗೆ ಮಹತ್ತರವಾದ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ದೊರಕಿದೆ. ಡಿ.ಕೆ.ಸಹೋದರರ ಅತ್ಯಾಪ್ತ ರಘುನಂದನ್ ರಾಮಣ್ಣಗೆ ಬೆಂಗಳೂರು– ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರದ (ಬಿಎಂಐಸಿಎಪಿಎ) ಅಧ್ಯಕ್ಷ ಸ್ಥಾನ ಲಭಿಸಿದೆ.
ತಾಲೂಕಿನ ಕಾಂಗ್ರೆಸ್ ಮುಖಂಡ ರಘುನಂದನ್ ರಾಮಣ್ಣರವರನ್ನು ಈ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಿಂದ ಹಿಡಿದು ಮೈಸೂರುರಿನವರೆಗೆ ಭೂ ಉಪಯೋಗ ಬದಲಾವಣೆ, ಯೋಜನಾ ಪ್ರದೇಶಕ್ಕೆ ಮಹಾಯೋಜನೆ ಸಿದ್ದಪಡಿಸುವುದು, ಮಹಾಯೋಜನೆಯಲ್ಲಿನ ಪ್ರಸ್ತಾವನೆಗಳನ್ನು ಜಾರಿಗೆ ತರುವುದು, ಯೋಜನೆಗಳ ಅನುಷ್ಠಾನ, ಮೂಲಭೂತ ಸೌಕರ್ಯಗಳ ಸ್ಥಾಪನೆ ಸೇರಿದಂತೆ ಹಲವಾರು ಮಹತ್ತರವಾದ ಜವಾಬ್ದಾರಿಯನ್ನು ಈ ಪ್ರಾಧಿಕಾರ ಹೊಂದಿದೆ.
ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ರಘುನಂದನ್ ರಾಮಣ್ಣ, ಮೂಲತಃ ಕಾಂಗ್ರೆಸ್ ಕುಟುಂಬ ಹಿನ್ನೆಲೆ ಹೊಂದಿದ್ದಾರೆ. ಇವರ ತಾತ ದಿ. ವಿ.ವೆಂಕಟಪ್ಪನವರು ಮೈಸೂರು ರಾಜ್ಯದ ಮೊಟ್ಟಮೊದಲ ವಿದ್ಯಾಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಇವರ ತಂದೆ ದಿ.ಟಿ.ವಿ.ರಾಮಣ್ಣನವರು ರಾಜಕೀಯವಾಗಿ ಹೆಸರು ಮಾಡಿದ್ದರು. ವಿದೇಶದಲ್ಲಿ ವ್ಯಾಸಂಗ ಮುಗಿಸಿ ತವರಿಗೆ ಆಗಮಿಸಿದ ರಘುನಂದನ್ ರಾಮಣ್ಣ, ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಹಿಂದೆ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯೂ ಸಹ ಆಗಿದ್ದರು. ಡಿ.ಕೆ.ಸಹೋದರರ ಅತ್ಯಾಪ್ತ ಬಳಗದ ಸದಸ್ಯರಾಗಿರುವ ಇವರು, ಕೆಪಿಎಸ್ಸಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.