

ಬೈಂದೂರು: ಬೈಂದೂರು ವತ್ತಿನೆಣೆ ಶ್ರೀಗುರು ರಾವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ದಲ್ಲಿ ಸೋಮವಾರ ರಾಯರ 354ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ ಪಾದಪೂಜೆ, ಅರ್ಚನೆ, ಆಂಜನೇಯ ಸ್ವಾಮಿಗೆ ಬೆಣ್ಣೆಸೇವೆ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಸೇವಾ ಸಂಗಮ ಶಿಶುಮಂದಿರದ ವಾತೆಯರಿಂದ ಭಗವದ್ಗೀತೆ ಶ್ಲೋಕ ಹಾಗೂ ವಿಷ್ಣು ಸಹಸ್ರನಾಮ ಪಠಣ, ಭಜನಾ ಸಂಕಿರ್ತನೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರು ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡರು.