

ಕೆ.ಸಂಜೀವ ಆರ್ಡಿ ಸಿದ್ದಾಪುರ
ವಿದ್ಯಾರ್ಥಿಗಳ ಕೊರತೆಯ ನೆಪದಲ್ಲಿ ಸರ್ಕಾರಿ ಶಾಲೆಗಳಿಗೆ ಬೀಗ ಬೀಳುತ್ತಿರುವ ಇಂದಿನ ದಿನಗಳಲ್ಲಿ ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಓದಿನೊಂದಿಗೆ ಕ್ರೀಡಾಕೂಟಗಳಲ್ಲೂ ಸಾಧನೆ ಮಾಡುತ್ತಿದ್ದರು. ಆದರೆ ಶಾಲೆಯಲ್ಲಿ ಕಾಯಂ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೆ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ. ಇದರಿಂದ ಮಕ್ಕಳು ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಲು ಹಿನ್ನಡೆಯಾಗುತ್ತಿದೆ.
ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಗೆ ಉಳ್ಳೂರು74, ಕಳಿನಜೆಡ್ಡು, ಬೈಲೂರು, ಮೂಡುಬಗೆ, ಅಂಪಾರು, ಜನ್ಸಾಲೆ, ಹಳ್ಳಿಹೊಳೆ, ಚಕ್ರಾ ಮೈದಾನ, ಕಮಲಶಿಲೆ, ಆಜ್ರಿ, ಕೊಡ್ಲಾಡಿ ಸೇರಿದಂತೆ ಸುತ್ತಮುತ್ತಲಿನಿಂದ ನೂರಾರು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಗುಣಮಟ್ಟದ ಶಿಕ್ಷಣದಿಂದಾಗಿ ಪ್ರತಿ ವರ್ಷವೂ ಮಕ್ಕಳ ದಾಖಲಾತಿ ಪ್ರವಾಣ ಏರಿಕೆಯಾಗುತ್ತಿದೆ.
ಕಾಯಂ ಶಿಕ್ಷಕರ ಕೊರತೆ: ನೂರಾರು ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಕಾಯಂ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಈ ಹಿಂದೆ ಇಲ್ಲಿ ಇಬ್ಬರು ಕಾಯಂ ದೈಹಿಕ ಶಿಕ್ಷಣ ಶಿಕ್ಷಕರಿದ್ದರು. ಒಬ್ಬರು 2022ರಲ್ಲಿ ನಿವೃತ್ತರಾದರೆ, ಮತ್ತೊಬ್ಬರು 2024ರಲ್ಲಿ ವರ್ಗಾವಣೆಯಾದರು. ಅನಂತರ ಆ ಹುದ್ದೆ ಖಾಲಿ ಬಿದ್ದಿದ್ದು, ಈವರೆಗೂ ಭರ್ತಿಯಾಗಿಲ್ಲ.
ಪ್ರಸ್ತುತ ಶಂಕರನಾರಾಯಣ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರನ್ನು ಮಂಗಳವಾರ, ಬುಧವಾರ ಹಾಗೂ ಅವಾಸೆಬೈಲು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರನ್ನು ಗುರುವಾರ, ಶುಕ್ರವಾರ ಸಿದ್ದಾಪುರ ಶಾಲೆಗೆ ನಿಯೋಜಿಸಲಾಗಿದೆ. ಕಾಯಂ ಶಿಕ್ಷಕರಿಲ್ಲದಿರುವುದು ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ತೊಡಕಾಗಿದೆ. ಈಗಾಗಲೇ ವಿವಿಧ ಹಂತಗಳ ಕ್ರೀಡಾಕೂಟಗಳು ಆರಂಭಗೊಂಡಿದ್ದರೂ ಸಾಕಷ್ಟು ತರಬೇತಿ ಇಲ್ಲದೆ ಈ ಮಕ್ಕಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಈ ಶಾಲೆಗೆ ಕಾಯಂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.
ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 557 ವಿದ್ಯಾರ್ಥಿಗಳು ವ್ಯಾಸಂಗ ವಾಡುತ್ತಿದ್ದಾರೆ. ಕಾಯಂ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಗೆ ತರಬೇತಿ ಸರಿಯಾಗಿ ದೊರಕುತ್ತಿಲ್ಲ. ತಾಲೂಕು, ಜಿಲ್ಲಾಮಟ್ಟದ ಕ್ರೀಡಾಕೂಟಗಳು ನಡೆಯುತ್ತಿದ್ದು, ಸೂಕ್ತ ತರಬೇತಿ ಇಲ್ಲದೆ ಮಕ್ಕಳು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಹುದ್ದೆ ಭರ್ತಿಗೆ ಕ್ರಮಕೈಗೊಳ್ಳಬೇಕು ಎಂದು ಪಾಲಕರು, ಹಳೇ ವಿದ್ಯಾರ್ಥಿಗಳು, ಶಿಕ್ಷಣಾಭಿವಾನಿಗಳು ಆಗ್ರಹಿಸಿದ್ದಾರೆ.
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಚಾಲನೆಯಲ್ಲಿವೆ. ಸಿದ್ದಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ದಾಖಲಾತಿ ಪ್ರವಾಣ ಹೆಚ್ಚಿರುವ ಹಿನ್ನಲೆ ಇಲ್ಲಿಗೆ ಕಾಯಂ ದೈಹಿಕ ಶಿಕ್ಷಣ ಶಿಕ್ಷಕರನ್ನು ಶೀಘ್ರವೇ ನೇಮಕಾತಿ ಮಾಡಲಾಗುವುದು. - ಶೋಭಾ ಶೆಟ್ಟಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ https://www.vijayavani.net/the-role-of-mothers-is-essential-in-student-life https://www.vijayavani.net/kundapra-language-is-prevalent-all-over-the-world