

* ಚನ್ನಪಟ್ಟಣ ಪ್ರತಿನಿಧಿಸಲಿರುವ ಚಾಲಕ
* ಎದುರಾಳಿಯ ರಕ್ತಚಿಮ್ಮಿಸಲು ತಂತ್ರಗಳ ಕಲಿಕೆ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ವಿಶ್ವವಿಖ್ಯಾತ ಮೈಸೂರು ದಸರಾದ ವಿಶೇಷತೆಗಳಲ್ಲಿ ವಜ್ರಮುಷ್ಟಿ ಕಾಳಗವೂ ಒಂದು. ಈ ಬಾರಿಯ ಕಾಳಗದಲ್ಲಿ ಎದುರಾಳಿಯ ರಕ್ತ ಚಿಮ್ಮಿಸಲು ಚನ್ನಪಟ್ಟಣದ ಜಟ್ಟಿ ರಾಘವೇಂದ್ರ ಜೆ. ಸಜ್ಜಾಗಿದ್ದಾರೆ.
ನಮ್ಮ ಮೈಸೂರು ದಸರಾಗೆ ಸರಿಸಾಟಿ ಬೇರೊಂದಿಲ್ಲ. ವಿಜಯದಶಮಿಯ ದಿನ ಜಂಬೂ ಸವಾರಿಗೂ ಮುನ್ನ ಅರಮನೆ ಆವರಣದಲ್ಲಿ ಹಲವು ಸಂಪ್ರದಾಯಗಳು ನಡೆಯುತ್ತವೆ. ಅವುಗಳಲ್ಲಿ ಈ ವಜ್ರಮುಷ್ಟಿ ಕಾಳಗವೂ ಒಂದು. ವಿಜಯದಶಮಿಯ ದಿನ ರಾಜವಂಶಸ್ಥರು ವಿಜಯ ಯಾತ್ರೆಗೆ ಹೋಗುವ ಮುನ್ನ ಅರಮನೆಯ ಕನ್ನಡಿ ತೊಟ್ಟಿ (ಕರಿಕಲ್ಲು ತೊಟ್ಟಿ)ಯಲ್ಲಿ ಜಟ್ಟಿಗಳಿಂದ ಆಯೋಜಿಸುವ ಜಟ್ಟಿ ಕಾಳಗ ಅಥವಾ ವಜ್ರಮುಷ್ಟಿ ಕಾಳಗಕ್ಕೆ ತನ್ನದೇ ಆದ ವೈಶಿಷ್ಟ್ಯ ಹಾಗೂ ಇತಿಹಾಸವಿದೆ. ಹಲವಾರು ವರ್ಷಗಳಿಂದ ಈ ಕಾಳಗವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಜಟ್ಟಿ ಕಾಳಗದಲ್ಲಿ ರಕ್ತ ಚಿಮ್ಮಿದ ನಂತರವೇ ಜಂಬೂಸವಾರಿ ಹೊರಡುವುದು.
ಎರಡು ಜೋಡಿ ಜಟ್ಟಿಗಳು ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದು, ರಾಜವಂಶಸ್ಥರ ಎದುರು ಕಾಳಗ ನಡೆಸುತ್ತಾರೆ. ಮೈಸೂರು, ಚಾಮರಾಜನಗರ, ಬೆಂಗಳೂರು ಹಾಗೂ ಚನ್ನಪಟ್ಟಣದಿಂದ ತಲಾ ಒಬ್ಬ ಜಟ್ಟಿಯನ್ನು ಆಯ್ಕೆ ಮಾಡಲಾಗುತ್ತದೆ. ಎರಡು ಜೋಡಿ ಜಟ್ಟಿಗಳು ತಮ್ಮ ಕೈ ಬೆರಳುಗಳಲ್ಲಿ ಧರಿಸಿದ ಆಯುಧ (ವಜ್ರಮುಷ್ಟಿ) ಯಿಂದ ಕಾದಾಟ ನಡೆಸುತ್ತಾರೆ. ಎದುರಾಳಿಯ ತಲೆಯಿಂದ ರಕ್ತ ಚಿಮ್ಮಿದಾಗ ವಜ್ರಮುಷ್ಟಿ ಕಾಳಗ ಕೊನೆಗೊಳ್ಳುತ್ತದೆ.
ವಜ್ರಮುಷ್ಟಿ ಕಾಳಗದಲ್ಲಿ ಈ ಬಾರಿ ಚನ್ನಪಟ್ಟಣವನ್ನು ರಾಘವೇಂದ್ರ ಜೆ. ಜಟ್ಟಿ ಪ್ರತಿನಿಧಿಸುತ್ತಿದ್ದಾರೆ. ಮೂಲತಃ ನಗರದ ಜಟ್ಟಿಗರ ಬೀದಿ ನಿವಾಸಿಗಳಾದ ಜಗ್ಗ ಹಾಗೂ ಸರೋಜಾ ದಂಪತಿ ಪುತ್ರ ರಾಘವೇಂದ್ರ, ವೃತ್ತಿಯಲ್ಲಿ ವಾಹನ ಚಾಲಕ. ಸದ್ಯ ಕುಡಿನೀರು ಕಟ್ಟೆಯ ಮಠದ ಬಯಲಿನಲ್ಲಿ ವಾಸಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಾಳಗದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಉಸ್ತಾದ್ ಪುರುಷೊತ್ತಮ್ ಹಾಗೂ ಮಾಜಿ ಜಟ್ಟಿಗಳಾದ ಚಂದ್ರಶೇಖರ್ ಮತ್ತು ಮನೋಜ್ ಜೆಟ್ಟಿ ಮಾರ್ಗದರ್ಶನದಲ್ಲಿ ಎದುರಾಳಿಯ ರಕ್ತ ಚಿಮ್ಮಲು ಬೇಕಾದ ತಂತ್ರಗಳ ಕಲಿಕೆಯಲ್ಲಿ ರಾಘವೇಂದ್ರ ನಿರತರಾಗಿದ್ದು, ಇದಕ್ಕಾಗಿ ಈಗಾಗಲೇ ತಾಲೀಮು ನಡೆಸುತ್ತಿದ್ದಾರೆ.