ರ‌್ಯಾಗಿಂಗ್ ನಮ್ಮ ಸಂಸ್ಕೃತಿಗೆ ವಿರುದ್ಧ

blm (3)
Published on

ಕಾರ್ಕಳ: ರ‌್ಯಾಗಿಂಗ್ ಎಂಬುದು ಕ್ರಿಮಿನಲ್ ಅಪರಾಧವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಎಲ್ಲರೊಂದಿಗೆ ಸ್ನೇಹದಿಂದ ಬಾಳ್ವೆ ನಡೆಸಿ ಸಜ್ಜನರಾಗಿ ಸಾಧನೆ ಮಾಡಬೇಕು. ರ‌್ಯಾಗಿಂಗ್ ನಮ್ಮ ಸಂಸ್ಕೃತಿ, ಸಭ್ಯತೆಗೆ ವಿರುದ್ಧವಾಗಿದೆ. ರಾಷ್ಟ್ರದ ಭವಿಷ್ಯ ಇಂದಿನ ವಿದ್ಯಾರ್ಥಿಗಳಲ್ಲಿದೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಪ್ರಸನ್ನ ಎಂ.ಎಸ್. ಹೇಳಿದರು. ನಿಟ್ಟೆ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ವತಿಯಿಂದ ಮಂಗಳವಾರ ಕಾಲೇಜಿನ ಶಾಂಭವಿ ಸೆಮಿನಾರ್ ಸಭಾಂಗಣದಲ್ಲಿ ಜರುಗಿದ ಆ್ಯಂಟಿ ರ‌್ಯಾಗಿಂಗ್ ಸಮಿತಿ ಸಭೆಯಲ್ಲಿ ಮಾತನಾಡಿದರು. ಎಲ್ಲ ವಿದ್ಯಾರ್ಥಿಗಳು ಸಾಧನೆ ಕಡೆ ಗಮನ ಕೊಡಬೇಕು. ಯಾರಾದರೂ ರ‌್ಯಾಗಿಂಗ್‌ಗೆ ಪ್ರೇರಣೆ, ರ‌್ಯಾಗಿಂಗ್ ಮೂಲಕ ಕಿರುಕುಳ ನೀಡಿದಲ್ಲಿ ಕಾಲೇಜಿನ ಆ್ಯಂಟಿ ರ‌್ಯಾಗಿಂಗ್ ಸಮಿತಿ ಗಮನಕ್ಕೆ ತರಬೇಕು. ಅಧ್ಯಾಪಕರು, ಪೊಲೀಸರು ಇರುವ ಈ ಸಮಿತಿ ವಿದ್ಯಾರ್ಥಿಗಳ ಸುರಕ್ಷತೆಗೆ ಮುತುವರ್ಜಿ ವಹಿಸಲಿದೆ. ಮಾದಕದ್ರವ್ಯ ವ್ಯಸನಗಳಿಂದ ಆಗುವ ಸಮಸ್ಯೆ, ಕಾನೂನು ತೊಡಕಿನಲ್ಲಿ ಸಿಲುಕಿಕೊಂಡರೆ ಮುಂದೆ ಆಗಬಹುದಾದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದರು. ನಿಟ್ಟೆ ಆಫ್ ಕ್ಯಾಂಪಸ್‌ನ ಅಭಿವೃದ್ಧಿ, ನಿರ್ವಹಣಾ ವಿಭಾಗದ ನಿರ್ದೇಶಕ ಎ.ಯೋಗೀಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಪೊಲೀಸ್ ಠಾಣೆ ಕ್ರೈಂ ವಿಭಾಗದ ಠಾಣಾಧಿಕಾರಿ ಸುಂದರ್, ನಿಟ್ಟೆ ಆಫ್ ಕ್ಯಾಂಪಸ್‌ನ ಪರೀಕ್ಷಾ ನಿಯಂತ್ರಕ ಡಾ.ಸುಬ್ರಹ್ಮಣ್ಯ ಭಟ್, ಉಪಕುಲ ಸಚಿವೆ ಡಾ.ರೇಖಾ ಭಂಡಾರ್ಕರ್ ಉಪಸ್ಥಿತರಿದ್ದರು. ನಿಟ್ಟೆ ತಾಂತ್ರಿಕ ಕಾಲೇಜು ಉಪಪ್ರಾಂಶುಪಾಲ ಡಾ.ನಾಗೇಶ್ ಪ್ರಭು ಸ್ವಾಗತಿಸಿದರು. ಮಾನವಿಕ ವಿಭಾಗ ಮುಖ್ಯಸ್ಥ, ಹುಡುಗರ ಹಾಸ್ಟೆಲ್ ಚೀಫ್ ವಾರ್ಡನ್ ಡಾ.ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.

ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ಉತ್ತಮ ಶಿಕ್ಷಣಕ್ಕೆ ಪೂರಕ ವ್ಯವಸ್ಥೆ ಹೊಂದಿದ್ದು, ವಿದ್ಯಾರ್ಥಿಗಳ ಸುರಕ್ಷತೆ, ಕಾಳಜಿಗೆ ಕಾನೂನಾತ್ಮಕವಾಗಿ ಇರುವ ಎಲ್ಲ ಸಮಿತಿ, ನಿಯಮಾವಳಿಗಳನ್ನು ವ್ಯವಸ್ಥಿತವಾಗಿ ಪಾಲಿಸಲಾಗುತ್ತದೆ. ವಿದ್ಯಾರ್ಥಿಗಳು ಈ ಬಗ್ಗೆ ಅರಿವು ಹೊಂದಿರಬೇಕು. -ಎ.ಯೋಗೀಶ್ ಹೆಗ್ಡೆ, ನಿಟ್ಟೆ ಆಫ್ ಕ್ಯಾಂಪಸ್‌ನ ಅಭಿವೃದ್ಧಿ, ನಿರ್ವಹಣಾ ವಿಭಾಗದ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net