

ಬಾಗಲಕೋಟೆ: ಸಹಕಾರ ಸಂಘಗಳು ಆರ್ಥಿಕ ವ್ಯವಹಾರದ ಜೊತೆ ಸಮಾಜದ ಒಳಿತಿಗಾಗಿಯೂ ಸೇವೆ ಮಾಡಬೇಕು ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನವನಗರದ ಡಾ.ಅಂಬೇಡ್ಕರ ಭವನದಲ್ಲಿ ಭಾನುವಾರ ಜರುಗಿದ ಜಿಲ್ಲಾ ರಡ್ಡಿ ನೌಕರರ ಪತ್ತಿನ ಸಹಕಾರ ಸಂಘದ ೮ ನೇ ವಾರ್ಷಿಕ ಮಹಾಸಭೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ ಎಂಬ ತತ್ವದಡಿ ಸಹಕಾರ ಸಂಸ್ಥೆಗಳು ಕರ‍್ಯ ನಿರ್ವಹಿಸಿ ಅಸಹಾಯಕರ ಬದುಕಿಗೆ ಬೆಳಕಾಗಬೇಕು ಎಂದರು.
ಜಿಲ್ಲಾ ರಡ್ಡಿ ನೌಕರರ ಪತ್ತಿನ ಸಹಕಾರ ಸಂಘ ಸಮಾಜದ ಪ್ರತಿಭಾವಂತ ಮಕ್ಕಳು, ಸಾಧಕರು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯ. ಸಮಾಜದ ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ತೋರುವ ನಿಟ್ಟಿನಲ್ಲಿ ಅವರನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ರಡ್ಡಿ ನೌಕರರ ಸಹಕಾರ ಸಂಘ ಸಮಾಜದ ನೌಕರರಿಗೂ ಹಾಗೂ ಇಡೀ ಸಮುದಾಯಕ್ಕೂ ಹಿತಕಾರಿಯಾಗಿ ಕೆಲಸ ಮಾಡಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ರಡ್ಡಿ ಸಮಾಜದ ನೌಕರರು ಇತರೆ ಸಂಸ್ಥೆಗಳಲ್ಲಿ ಹಣ ಠೇವಣಿ ಮಾಡುವ ಬದಲು ಸಮಾಜದ ಸಹಕಾರಿ ಸಂಘದಲ್ಲಿ ಹೂಡಿಕೆ ಮಾಡಿ ಸಂಸ್ಥೆಯನ್ನು ಬೆಳೆಸಬೇಕು ಎಂದು ಹೇಳಿದರು.
ಸಂಘದ ವಾರ್ಷಿಕ ವರದಿಯನ್ನು ಅಧ್ಯಕ್ಷ ಎಸ್.ಬಿ.ಮಾಚಾ ಓದಿ, ಸದಸ್ಯರಿಗೆ ನೀಡುವ ಸಾಲದ ಮಿತಿಯನ್ನು ೨.೫೦ ಲಕ್ಷದಿಂದ ೩ ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದರು.
ರಡ್ಡಿ ಜನಸಂಘದ ನಿರ್ದೇಶಕರಾದ ಎನ್.ಶೇಖರರೆಡ್ಡಿ, ಎಂ.ಕೃಷ್ಣಾರೆಡ್ಡಿ ಮಾತನಾಡಿದರು. ಎರೆಹೊಸಳ್ಳಿಯ ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಪಿ ಅಮರನಾಥ ರೆಡ್ಡಿ, ಮಹಿಳಾ ವಿವಿ ಉಪಕುಲಪತಿ ರಾಜೇಶ್ವರಿ ಬದನೂರ, ನ್ಯಾಯವಾದಿ ಎಸ್.ಕೆ.ಯಡಹಳ್ಳಿ, ಮಹೇಶ ಕಕರೆಡ್ಡಿ, ನಾರಾಯಣ ಹಾದಿಮನಿ, ಎಸ್.ಎಸ್.ನಾಲತ್ತವಾಡ, ತಹಸೀಲ್ದಾರ ಅರುಣ ದೇಸಾಯಿ, ಸೋಮಶೇಖರ ರೆಡ್ಡಿ, ಮಾಲತೇಶ ಅಮಾತೆಪ್ಪನವರ, ಕಿರಣರೆಡ್ಡಿ, ನಾಗಭೂಷಣರೆಡ್ಡಿ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಹೇಮರಡ್ಡಿ ಮಲ್ಲಮ್ಮ ಭಜನಾ ಮಂಡಳಿಯವರು ವೇಮನ ವಚನ ಪಠಿಸಿದರು. ಸಂಘದ ನಿರ್ದೇಶಕ ಆರ್.ಎಸ್.ಪಾಟೀಲ ಸ್ವಾಗತಿಸಿದರು. ಪಾಂಡು ಸನ್ನಪ್ಪನವರ, ಉಮಾ ಕೆಳಗಿನಗೌಡರ ನಿರೂಪಿಸಿದರು. ಉಪಾಧ್ಯಕ್ಷ ಎಸ್.ಪಿ.ಜೈನಾಪುರ ವಂದಿಸಿದರು.