

ಕನಕಪುರ : ರೇಬೀಸ್ ಮಾರಣಾಂತಿಕ ಕಾಯಿಲೆಯಾಗಿದ್ದು, ಲಸಿಕೆ ಕೊಡಿಸುವ ಮೂಲಕ ರೋಗ ತಡೆಗಟ್ಟಬಹುದು ಎಂದು ತಾಲೂಕು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಯು.ಸಿ. ಕುಮಾರ್ ತಿಳಿಸಿದರು.
ಜಿಲ್ಲಾ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರೋಟರಿ ಲಯನ್ಸ್‌ಕ್ಲಬ್ ಸಂಯುಕ್ತಾಶ್ರಯದಲ್ಲಿ ನಗರದ ಕೆ.ಎನ್.ಎಸ್. ವೃತ್ತ ಸಮೀಪದ ಪಶು ಆಸ್ಪತ್ರೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೇಬೀಸ್ ಲಸಿಕಾ ಶಿಬಿರದಲ್ಲಿ ಮಾತನಾಡಿ, ರೋಗ ಪೀಡಿತ ಪ್ರಾಣಿ ಕಚ್ಚಿದರೆ ಮೂರು ತಿಂಗಳ ಬಳಿಕ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ರೋಗಕ್ಕೆ ಸೂಕ್ತ ಚಿಕಿತ್ಸೆ ಇಲ್ಲದಿರುವುದರಿಂದ ಸಾಕುನಾಯಿ ಹಾಗೂ ಬೀದಿನಾಯಿ ಪ್ರಿಯರು ರೇಬೀಸ್ ಲಸಿಕೆ ಕೊಡಿಸುವುದರಿಂದ ರೋಗವನ್ನು ತಡೆಗಟ್ಟಬಹುದು ಎಂದರು.
ವಿಚಿತ್ರ ವರ್ತನೆ, ಜೊಲ್ಲು ಸುರಿಸುವ, ವಿನಾಕಾರಣ ಕಚ್ಚುವ, ಸದಾ ಬೊಗಳುವ ನಾಯಿಗಳಿಂದ ಅಂತರ ಕಾಯ್ದುಕೊಳ್ಳುವುದು ಒಳಿತು. ಹುಚ್ಚುನಾಯಿ ಕಡಿದರೆ ಮೂರು ತಿಂಗಳೊಳಗೆ ರೋಗವು ಉಲ್ಬಣಗೊಂಡು ಜ್ವರ, ಅತಿಯಾದ ತಲೆನೋವು, ವಾಂತಿ, ಗೊಂದಲ, ಭ್ರಮೆ, ನಿದ್ರಾಹೀನತೆಯಿಂದ ಕೊನೆಗೆ ಪಾರ್ಶ್ವವಾಯುವಿಗೆ ಒಳಗಾಗಿ ಸಾವಿಗೀಡಾಗಬೇಕಾಗುತ್ತದೆ. ಆದ್ದರಿಂದ ನಾಯಿ ಕಚ್ಚಿದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಂಡು ಜೀವ ಉಳಿಸಿಕೊಳ್ಳಬೇಕು ಎಂದರು.
ಲಯನ್ಸ್‌ಕ್ಲಬ್ ಸಿಲ್ಕ್‌ಸಿಟಿ ಕಾರ್ಯದರ್ಶಿ ಚಿಕ್ಕಕೆಂಪೇಗೌಡ ಮಾತನಾಡಿ, ಪ್ರಾಣಿಪ್ರಿಯರು ಆಸ್ಪತ್ರೆಗೆ ಭೇಟಿನೀಡಿ ಉಚಿತವಾಗಿ ಲಸಿಕೆ ಕೊಡಿಸಬೇಕು ಎಂದರು.