ರೈತರ ಕೈ ಸೇರದ ರಾಗಿ ಹಣ

Raagi
Published on
  • ಅನುದಾನ ನೀಡದ ಸರ್ಕಾರ
  • ಡಿಬಿಟಿಯಡಿ ರೈತರ ಖಾತೆಗೆ ಬರಲಿದೆ ಎನ್ನುವ ಅಧಿಕಾರಿಗಳು

ಗಂಗಾಧರ್ ಬೈರಾಪಟ್ಟಣ ರಾಮನಗರ


ಸರ್ಕಾರ ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿ ಮಾಡಿ ಒಂದೂವರೆ ತಿಂಗಳು ಕಳೆದರೂ ಹಣ ಸಂದಾಯವಾಗದೆ ರೈತರು ನಿತ್ಯ ಕಚೇರಿಗೆ ಅಲೆಯುವಂತಾಗಿದೆ.


ನ್ಯಾಯಬೆಲೆ ಅಂಗಡಿಗಳ ಮೂಲಕ ಸಾರ್ವಜನಿಕರಿಗೆ ರಾಗಿಯನ್ನು ಪಡಿತರವಾಗಿ ವಿತರಣೆ ಮಾಡುವ ನಿರ್ಧಾರ ಕೈಗೊಂಡ ಸರ್ಕಾರ, ರೈತರನ್ನು ರಾಗಿ ಬೆಳೆಯಲು ಉತ್ತೇಜಿಸಿ ಬೆಂಬಲ ಬೆಲೆಯಡಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಮೂಲಕ ರಾಗಿಯನ್ನು ಪ್ರತಿ ವರ್ಷ ಖರೀದಿ ಮಾಡುತ್ತಿದೆ. ಈ ಬಾರಿ ರಾಗಿ ಖರೀದಿ ಮಾಡಿದ ತಕ್ಷಣವೇ ರೈತರ ಖಾತೆಗೆ ಹಣ ಜಮೆ ಆಗದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದ್ದು, ಹಣಕ್ಕಾಗಿ ಪ್ರತಿ ದಿನ ರೈತರು ಕಚೇರಿಗೆ ಎಡತಾಕುವಂತಾಗಿದೆ.

ಸರ್ಕಾರದಿಂದ ಹಣ ಬಂದಿಲ್ಲ:


ಬೆಂಬಲ ಬೆಲೆಯಡಿ ರಾಗಿ ಖರೀದಿ ನಂತರ ರೈತರ ಖಾತೆಗೆ ನೇರ ನಗದು ವರ್ಗಾವಣೆಯಡಿ (ಡಿಬಿಟಿ) ಹಣ ಜಮೆ ಆಗಬೇಕಿದೆ. ಆದರೆ, ಈ ಹಣ ಸಂದಾಯವಾಗಲು ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ ಎನ್ನುವುದು ಅಧಿಕಾರಿಗಳ ಮಾಹಿತಿ. ಆರಂಭದಲ್ಲಿ ರಾಗಿ ಮಾರಾಟ ಮಾಡಿದ ರೈತರನ್ನು ಹೊರತುಪಡಿಸಿ, ಮಾರ್ಚ್‌ನಲ್ಲಿ ರಾಗಿ ಮಾರಾಟ ಮಾಡಿದ ಯಾವುದೇ ರೈತರಿಗೆ ಹಣ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರೈತರು ಕೇಳಿದರೆ ನಾವು ಮೇಲಿನ ಕಚೇರಿಗೆ ಕಳುಹಿಸಿದ್ದೇವೆ. ಅವರಿಂದಲೇ ನಿಮಗೆ ಹಣ ಬರುತ್ತೆ, ನಾವೇನು ಮಾಡಲು ಸಾಧ್ಯವಿಲ್ಲ ಎನ್ನುವ ಉತ್ತರವನ್ನು ಅಧಿಕಾರಿಗಳು ನೀಡುತ್ತಿದ್ದಾರೆ.
ಜೂ.30ವರೆಗೂ ರಾಗಿ ಖರೀದಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಸರ್ಕಾರ ಪ್ರತಿ ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆಯಡಿ 3870 ರೂ.ಗೆ ಖರೀದಿ ಮಾಡುತ್ತಿದ್ದು, ಪ್ರತಿ 50 ಕೆಜಿ ತೂಕಕ್ಕೆ 2 ಕೆಜಿ ರಾಗಿಯನ್ನು ಹೆಚ್ಚುವರಿಯಾಗಿ ರೈತರಿಂದ ಪಡೆಯಲಾಗಿದೆ ಎನ್ನುವ ಆರೋಪವೂ ರೈತರದಾಗಿದೆ.

ನಮಗೆ ಹಣ ನೀಡಿ:


ಮಧ್ಯವರ್ತಿಗಳ ಹಾವಳಿ ಮತ್ತು ಅಧಿಕಾರಿಗಳ ಕಿರುಕುಳ ತಪ್ಪಿಸುವ ಸಲುವಾಗಿ ರೈತರ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುವ ಆನ್‌ಲೈನ್ ವ್ಯವಸ್ಥೆ ಜಾರಿಗೆ ಬಂದಿದೆ. ಇದರಿಂದ ಸಾಕಷ್ಟು ರೈತರಿಗೆ ಅನುಕೂಲವಾಗಿದೆ. ಆದರೆ ರಾಗಿ ಮಾರಾಟ ಮಾಡಿ ಹಲವಾರು ದಿನಗಳು ಕಳೆದರೂ ಹಣ ಸಿಗದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿಯೂ ಸಹ ರಾಗಿಗೆ ಉತ್ತಮ ಬೆಲೆ ಇದೆ. ಅಲ್ಲೇ ಮಾರಾಟ ಮಾಡಿದ್ದರೆ ನಮಗೆ ತಕ್ಷಣವೇ ಹಣ ಕೈ ಸೇರುತಿತ್ತು. ಆದರೆ ಈಗ ಸರ್ಕಾರದ ಎಲ್ಲಾ ನಿಯಮಗಳಿಗೆ ಬದ್ಧವಾಗಿ ರಾಗಿ ಮಾರಾಟ ಮಾಡಿದ್ದರೂ ಹಣ ಮಾತ್ರ ನಮಗೆ ಸಿಕ್ಕಿಲ್ಲ. ಶೀಘ್ರವೇ ಹಣ ಬಿಡುಗಡೆ ಆಗದಿದ್ದರೆ ಖಂಡಿತವಾಗಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎನ್ನುತ್ತಾರೆ ರೈತರು.

===
ರೈತರ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತದೆ. ನಾವು ಖರೀದಿಯನ್ನಷ್ಟೇ ಮಾಡಿ, ಈ ಮಾಹಿತಿಯನ್ನು ಸಂಬಂಧಪಟ್ಟವರೊಂದಿಗೆ ಹಂಚಿಕೊಂಡಿದ್ದೇವೆ. ರಾಜ್ಯದಲ್ಲಿ ಇದೇ ರೀತಿ ಇದ್ದು, ಹಣವನ್ನು ಸರ್ಕಾರವೇ ರೈತರ ಖಾತೆಗೆ ನೇರವಾಗಿ ಹಾಕಲಿದೆ.
ರಮೇಶ್, ಕೆಎಫ್‌ಸಿಎಸ್‌ಸಿ ಅಧಿಕಾರಿ, ರಾಮನಗರ

===
ಸುಮಾರು 18 ಕ್ವಿಂಟಾಲ್ ರಾಗಿಯನ್ನು ಮಾರಾಟ ಮಾಡಿ ಹಲವಾರು ದಿನಗಳು ಕಳೆದರೂ ಹಣ ಇನ್ನೂ ಬಂದಿಲ್ಲ. ಅಧಿಕಾರಿಗಳನ್ನು ಕೇಳಿದರೆ ನಿಮ್ಮ ಖಾತೆಗೆ ಬರುತ್ತದೆ ಎಂದು ಹೇಳುತ್ತಾರೆ. ಯಾವಾಗ ಎನ್ನುವ ಸ್ಪಷ್ಟನೆ ಇಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಮಾರಿದ್ದರೆ ತಕ್ಷಣವೇ ಹಣ ಕೈ ಸೇರುತಿತ್ತು.
ಸುಂದರೇಶ್, ದೊಡ್ಡಗಂಗವಾಡಿ ರೈತ, ರಾಮನಗರ

===

500ಕ್ಕೂ ಹೆಚ್ಚು ರೈತರಿಗೆ ಸಂದಾಯವಾಗಿಲ್ಲ

ಜಿಲ್ಲೆಯ 500ಕ್ಕೂ ಹೆಚ್ಚು ರೈತರಿಗೆ ಹಣ ಸಂದಾಯವಾಗಿಲ್ಲ ಎನ್ನಲಾಗಿದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಇಲ್ಲಿಯವರಗೂ ರಾಗಿ ಮಾರಾಟ ಮಾಡಿದ ರೈತರಿಗೆ ಹಣ ಸಂದಾಯವಾಗಿಲ್ಲ. ಈಗಾಗಲೇ ಬರದ ಬವಣೆಯಲ್ಲಿ ಬೆಂದಿರುವ ರೈತರು ರಾಗಿಯಿಂದ ಬರುವ ಅಷ್ಟಿಷ್ಟು ಹಣದಿಂದಲೇ ಜೀವನ ನಡೆಸಬೇಕಿದೆ. ಒಂದು ವೇಳೆ ಪೂರ್ವ ಮುಂಗಾರು ಸುರಿದರೂ ಬರದ ನೋವನ್ನು ಮರೆತು ಮತ್ತೆ ವ್ಯವಸಾಯಕ್ಕೆ ಇಳಿಬೇಕಿದೆ. ಆದರೆ, ಇವರ ಬಳಿ ಹಣ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net