

ರಾಮನಗರ : ನಗರದ ಛತ್ರದಬೀದಿಯಲ್ಲಿ ಭಕ್ತಸಂರಕ್ಷಣಾರ್ಥವಾಗಿ ನೆಲೆಸಿರುವ ಶ್ರೀರಾಮದೇವರ ಮಹಾರಥೋತ್ಸವ ಸೋಮವಾರ ಯಶಸ್ವಿಯಾಗಿ ಸಹಸ್ರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ನಾಡಿನ ಪ್ರಸಿದ್ಧ ರಥೋತ್ಸವಗಳಲ್ಲಿ ರಾಮನಗರದ ಶ್ರೀರಾಮ ದೇವರ ರಥೋತ್ಸವ ಒಂದಾಗಿದೆ. ಪುರಾತನ ಕಾಲದಿಂದಲೂ ಶ್ರೀರಾಮ ನವಮಿ ಮಾರನೇ ದಿನ ರಥೋತ್ಸವ ನಡೆಯುತ್ತಾ ಬಂದಿದೆ. ರಾಮನಗರ ಜಿಲ್ಲೆ ಸೇರಿ ಬೇರೆ ಬೇರೆ ಜಿಲ್ಲೆಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ರಥ ಎಳೆದು ಪುನೀತರಾದರು.
ಉತ್ಸವಮೂರ್ತಿ ಪ್ರತಿಷ್ಠಾಪನೆಯೊಡನೆ ಸಿಂಗಾರಗೊಂಡ ರಥಕ್ಕೆ ಬೆಳಗ್ಗೆ 10.20ಕ್ಕೆ ಅರ್ಚಕ ಎ. ನರಸಿಂಹಭಟ್ಟರು ಧಾರ್ಮಿಕ ವಿಧಿ ವಿಧಾನಗಳ ಪೂಜೆ ಸಲ್ಲಿಸಿದ ನಂತರ ತಹಸೀಲ್ದಾರ್ ಬಿ. ತೇಜಸ್ವಿನಿ ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ರಥ ಸುಮಾರು 50 ಅಡಿಯಷ್ಟು ಎತ್ತರವಿತ್ತು. ಜೈ ಶ್ರೀರಾಂ, ಜೈ ಜೈ ಶ್ರೀರಾಂ ಘೋಷಣೆ ಮುಗಿಲು ಮುಟ್ಟಿದ್ದವು. ತಮಟೆ ಜಾನಪದ ಕಲಾ ಮೇಳಗಳು ರಥೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದವು. ಬಾಳೆ ಹಣ್ಣು, ದವನವನ್ನು ರಥದತ್ತ ತೂರಿ ಭಕ್ತಿಯ ಪರಾಕಾಷ್ಠೆಯಲ್ಲಿ ಭಕ್ತರು ಮಿಂದೆದ್ದರು. ಯುವಕರು ಕುಣಿದು ಕುಪ್ಪಳಿಸಿದರು.
ಅಗ್ರಹಾರದ ಅಭಯ ಆಂಜನೇಯಸ್ವಾಮಿ ದೇವಾಲಯದ ಬಳಿಯಿಂದ ರಥೋತ್ಸವ ಆರಂಭವಾಗಿ ಬೆಳಗ್ಗೆ 11 ಗಂಟೆಗೆ ಕಾಮಣ್ಣನ ಗುಡಿ ವೃತ್ತದಲ್ಲಿ ಬಂದು ನಿಂತಿತು. ಭಕ್ತರಿಂದ ಮಧ್ಯಾಹ್ನ 3 ಗಂಟೆವರೆಗೂ ಪೂಜೆ ನೆರವೇರಿತು. ನಂತರ ಎಂ.ಜಿ.ರಸ್ತೆ, ಮುಖ್ಯ ರಸ್ತೆ, ಛತ್ರದಬೀದಿಯಲ್ಲಿ ರಥ ಸಾಗಿ ಬಂದು ಶ್ರೀರಾಮ ದೇವಾಲಯದ ಬಳಿ ಕೊನೆಗೊಂಡಿತು.
ಜನಪ್ರತಿನಿಧಿಗಳು ಭಾಗಿ:
ಬೆಂಗಳೂರು ಗ್ರಾಮಾಂತರ ಸಂಸದ ಸಿ.ಎನ್. ಮಂಜುನಾಥ್, ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜು, ನಗರಸಭಾ ಅಧ್ಯಕ್ಷ ಕೆ.ಶೇಷಾದ್ರಿ, ಮಾಜಿ ಶಾಸಕ ಕೆ.ರಾಜು, ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ರಥ ಚಾಲನೆ ಸಂದರ್ಭದಲ್ಲಿ ಭಾಗವಹಿಸಿದ್ದರು.
ಅರವಂಟಿಗೆ
ಎಂ.ಜಿ.ರಸ್ತೆ, ಮುಖ್ಯರಸ್ತೆ, ಛತ್ರದ ಬೀದಿ ಅರಳೀಮರದ ಹತ್ತಿರ ಶ್ರೀರಾಮ ರಥೋತ್ಸವ ಅರವಂಟಿಗೆ ಯುವಕ ಸಮಿತಿ, ಖಾಸಗಿ ಬಸ್ ನಿಲ್ದಾಣ, ಐಜೂರು, ಛತ್ರದ ಬೀದಿಯಲ್ಲಿ ಗಣೇಶ್ ಜ್ಯುವೆಲ್ಲರ್ಸ್ ಮಾಲೀಕ ಲಕ್ಷ್ಮಣ್ ಅವರಿಂದ, ಕೋರ್ಟ್‌ರಸ್ತೆಯಲ್ಲಿ ರೋಟರಿ ಸಿಲ್ಕ್ ಸಿಟಿಯಿಂದ ಮತ್ತು ನಗರದ ವಿವಿಧ ಸ್ಥಳಗಳಲ್ಲಿ ಅರವಂಟಿಗೆ ನಡೆದವು.