ಆರೋಪಿ ಪತ್ತೆಗೆ ಬಾಡಿಗೆ ಕಾರು ತರಲು ಹೇಳಿದ SI: ದೂರುದಾರನಿಗೆ ತಮ್ಮ ಕಾರನ್ನೇ ನೀಡಿ SIಗೆ ಶಾಕ್ ಕೊಟ್ಟ SP..!

SP
Published on

ತುಮಕೂರು: ಆರೋಪಿಗಳನ್ನು ಹುಡುಕಲು ಬಾಡಿಗೆ ಕಾರು ತರುವಂತೆ ದೂರುದಾರನಿಗೆ ಸಬ್​ ಇನ್ಸ್​ಪೆಕ್ಟರ್​ ಸೂಚನೆ ನೀಡಿದ ಬೆನ್ನಲ್ಲೇ ದೂರುದಾರನಿಗೆ ತಮ್ಮ ಕಾರನ್ನೇ ನೀಡುವ ಮೂಲಕ ಎಸ್​ಐಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶಾಕ್ ಕೊಟ್ಟ ಘಟನೆ ನಡೆದಿದೆ.

ತುರುವೇಕೆರೆ ಸರ್ಕಲ್ ಇನ್ಸ್​ಪೆಕ್ಟರ್​ ಕಚೇರಿಯಲ್ಲಿ ಈ ವಿನೂತನ ಪ್ರಸಂಗ ನಡೆದಿದೆ. ಕೋಡಿಹಳ್ಳಿಯಲ್ಲಿ ಶಿವಮ್ಮ ಎನ್ನುವವರ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಶಿವಮ್ಮ ಪುತ್ರ ಅರುಣ್​, ಶಿವಪ್ರಕಾಶ್​ ಮತ್ತು ಚಂದನ್​ ಎಂಬುವರ ಮೇಲೆ ದೂರು ನೀಡಿದ್ದರು.

ಆದರೆ, ಘಟನೆ ನಡೆದು 3 ತಿಂಗಳು ಕಳೆದರೂ ಆರೋಪಿಗಳನ್ನು ಮಾತ್ರ ಪೊಲೀಸರು ಬಂಧಿಸಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಆರೋಪಿಗಳನ್ನು ಹುಡುಕಲು ಬಾಡಿಗೆ ಕಾರು ತೆಗೆದುಕೊಂಡು ಬರುವಂತೆ ಎಸ್​ಐ ದಂಡಿನಶಿವರ ಉಡಾಫೆಯ ಮಾತುಗಳನ್ನಾಡಿದ್ದರು. ಅದಕ್ಕೆ ಪಿಎಸ್ಐ ಶಿವಲಿಂಗಯ್ಯ ಹಾಗೂ ಸಿಪಿಐ ನವೀನ್ ಕೂಡ ಸಾಥ್​ ನೀಡಿದ್ದರು.

ಇತ್ತ ಪಿಎಸ್ಐ ಹಾಗೂ ಸಿಪಿಐ ಹೇಳಿಕೆಯಿಂದ ರೊಚ್ಚಿಗೆದ್ದ ದೂರುದಾರ ಅರುಣ್, ಈ ವಿಚಾರವನ್ನು ಎಸ್ಪಿ ರಾಹುಲ್ ಕುಮಾರ್ ಅವರಿಗೆ ತಿಳಿಸಿ, ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಬಳಿಕ ಎಸ್ಪಿ ರಾಹುಲ್​ ಅವರು ತಾವು ಓಡಾಡುವ ಸರ್ಕಾರಿ ಕಾರನ್ನು ದೂರುದಾರ ನಾಗೇಂದ್ರಗೆ ಕೊಟ್ಟು ಕಳುಹಿಸಿದರು. ದೂರುದಾರ ಎಸ್ಪಿ ಕಾರಿನಲ್ಲಿ ಬಂದಿದ್ದನು ಕಂಡು ಪೊಲೀಸರು ಕಕ್ಕಾಬಿಕ್ಕಿಯಾದರು.

ಎಸ್ಪಿ ರಾಹುಲ್​ ಅವರ ಸ್ಪಂದನೆಯಿಂದಾಗಿ ಪ್ರಕಣಕ್ಕೆ ಒಂದು ಬಲ ಬಂದಂತಾಗಿದ್ದು, ಅರುಣ್​ ಪ್ರಕರಣ ಬೇಗ ಇತ್ಯರ್ಥ ಆಗುವ ಸಾಧ್ಯತೆ ಇದೆ. ಅಲ್ಲದೆ, ಎಸ್ಪಿ ಅವರ ಕಾರ್ಯವೈಖರಿಗೆ ಅಲ್ಲಿನ ಜನರು ಬಹುಪರಾಕ್​ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net