

ಧಾರವಾಡ: ಕಲ್ಲಂಗಡಿ ಹಣ್ಣಿನಂಗಡಿ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಸಂಘಟನೆಯ ನಾಲ್ವರು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಬಂಧಿತರನ್ನು ಶ್ರೀರಾಮ ಸೇನೆ ತಾಲೂಕು ಸಂಚಾಲಕ ಮೈಲಾರಪ್ಪ ಗುಡ್ಡಪ್ಪನವರ, ಮಹಾಲಿಂಗ ಐಗಳಿ, ಚಿದಾನಂದ ಕಲಾಲ ಹಾಗೂ ಕುಮಾರ ಕಟ್ಟಿಮನಿ ಎಂದು ಗುರುತಿಸಲಾಗಿದೆ.
ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ವ್ಯಾಪಾರ ಧರ್ಮ ಸಂಘರ್ಷದ ಹಿನ್ನೆಲೆಯಲ್ಲಿ ನುಗ್ಗಿಕೇರಿ ಹನುಮಂತ ದೇವಸ್ಥಾನದಲ್ಲಿ ಅನ್ಯಧರ್ಮಿಯ ವ್ಯಕ್ತಿ ಇಟ್ಟುಕೊಂಡಿದ್ದ ಕಲ್ಲಂಗಡಿ ಹಣ್ಣಿನಂಗಡಿಯನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಧ್ವಂಸ ಮಾಡಿದ್ದರು. ಈ ಸಂಬಂಧ ಹಾನಿಗೀಡಾದ ಕಲ್ಲಂಗಡಿ ಹಣ್ಣಿನಂಗಡಿ ಮಾಲೀಕ ನಬೀಸಾಬ್ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆಯ ಬಳಿಕ ನಬೀಸಾಬ್ ಅವರು ಕಣ್ಣೀರಾಕುವ ದೃಶ್ಯ ವೈರಲ್ ಆಗಿತ್ತು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೂಗು ಕೇಳಿಬಂದಿತ್ತು. ಇನ್ನೊಂದೆಡೆ ನಬೀಸಾಬ್ ಅವರ ಸಂಕಷ್ಟವನ್ನು ನೋಡಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು 10 ಸಾವಿರ ಸಹಾಯಧನವನ್ನು ನೀಡಿ ಬಡ ವ್ಯಾಪಾರಿಗೆ ಬೆಂಗಾವಲಾಗಿದ್ದಾರೆ. (ದಿಗ್ವಿಜಯ ನ್ಯೂಸ್)