More

    ಇಮ್ರಾನ್ ಔಟ್, ಶೆಹಬಾಜ್ ಹೊಸ ಕ್ಯಾಪ್ಟನ್: ಪಾಕಿಸ್ತಾನ ರಾಜಕೀಯ ನಾಟಕಕ್ಕೆ ತೆರೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕಳೆದ ಐದು ತಿಂಗಳ ಅವಧಿಯಲ್ಲಿ ಉಂಟಾಗಿದ್ದ ರಾಜಕೀಯ ಹೋರಾಟಕ್ಕೆ ಭಾನುವಾರ ತಾತ್ತಿ್ವಕ ಅಂತ್ಯ ಸಿಕ್ಕಿದೆ. ನ್ಯಾಷನಲ್ ಅಸೆಂಬ್ಲಿಯಲ್ಲಿ ಕೊನೆಗೂ ಅವಿಶ್ವಾಸ ಗೊತ್ತುವಳಿ ಮತ ಎದುರಿಸಿದ ಇಮ್ರಾನ್ ಖಾನ್, ಪ್ರಧಾನಿ ಪಟ್ಟದಿಂದ ಪದಚ್ಯುತಗೊಂಡರು. ಸದನದ 342 ಸದಸ್ಯರ ಪೈಕಿ 174 ಸದಸ್ಯರು ಗೊತ್ತುವಳಿ ಪರ ಮತಚಲಾಯಿಸಿದರು.

    ನಾಟಕೀಯ ಬೆಳವಣಿಗೆ: ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆದೇಶ ಪ್ರಕಾರ, ಶನಿವಾರ ಬೆಳಗ್ಗೆ 10.30ಕ್ಕೆ ನ್ಯಾಷನಲ್ ಅಸೆಂಬ್ಲಿಯ ವಿಶೇಷ ಅಧಿವೇಶನ ನಡೆಯಿತು. ಅಧಿವೇಶನದ ಆರು ಅಂಶಗಳ ಕಾರ್ಯಸೂಚಿ ಪ್ರಕಾರ, ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕುವುದು ನಾಲ್ಕನೇಯ ಅಂಶವಾಗಿತ್ತು. ಮತದಾನವನ್ನು ಸಾಧ್ಯವಾದಷ್ಟು ವಿಳಂಬಗೊಳಿಸುವ ಸರ್ಕಾರ ಪ್ರಯತ್ನ ಢಾಳಾಗಿ ಗೋಚರಿಸುತ್ತಿತ್ತು. ಕೊನೆಯ ಕ್ಷಣದ ತನಕವೂ ಹೋರಾಟ ನಡೆಸುವುದಾಗಿ ಹೇಳಿದ ಇಮ್ರಾನ್ ಖಾನ್ ಮಾತು ಇದಕ್ಕೆ ಪುಷ್ಟಿ ನೀಡಿತ್ತು. ಶನಿವಾರ ಮಧ್ಯರಾತ್ರಿ 12 ಗಂಟೆ ದಾಟಿದರೂ ಅವಿಶ್ವಾಸ ಗೊತ್ತುವಳಿ ಮತಕ್ಕೆ ಬಂದಿರಲಿಲ್ಲ. ಇದಾಗಿ ಒಂದು ಗಂಟೆ ಕಳೆದ ಬಳಿಕ ಅನಿವಾರ್ಯವಾಗಿ ಅವಿಶ್ವಾಸ ಗೊತ್ತುವಳಿ ಮತಕ್ಕೆ ಹಾಕಲಾಗಿತ್ತು. 342 ಸದಸ್ಯ ಬಲದಲ್ಲಿ ಗೊತ್ತುವಳಿ ಅಂಗೀಕಾರವಾಗಲು 172 ಮತಗಳ ಅವಶ್ಯಕತೆ ಇತ್ತು. ಇದನ್ನು ಮೀರಿ 174 ಮತಗಳು ಗೊತ್ತುವಳಿ ಪರ ಬಿದ್ದವು. ಹೀಗೆ ನಾಟಕೀಯ ವಿದ್ಯಮಾನಗಳ ಬಳಿಕ ಇಮ್ರಾನ್ ಖಾನ್ ಪದಚ್ಯುತಿ ನಡೆಯಿತು.

    ಇಮ್ರಾನ್ ಔಟ್, ಶೆಹಬಾಜ್ ಹೊಸ ಕ್ಯಾಪ್ಟನ್: ಪಾಕಿಸ್ತಾನ ರಾಜಕೀಯ ನಾಟಕಕ್ಕೆ ತೆರೆತೆರೆಮರೆಯ ವೀರರು: ಇಮ್ರಾನ್ ಖಾನ್ ಪದಚ್ಯುತಿ ನಡೆಸುವುದಕ್ಕೆ ತೆರೆಮರೆಯಲ್ಲಿ ಸಾಕಷ್ಟು ಪ್ರಯತ್ನಗಳಾಗಿವೆ. ಇದರಲ್ಲಿ ಪ್ರಮುಖ ಪಾತ್ರವಹಿಸಿದವರು ಅನೇಕರು. ಇಮ್ರಾನ್ ನೇತೃತ್ವದ ಪಿಟಿಐನ ಬಂಡಾಯ ನಾಯಕರು ಕೂಡ ಇದರಲ್ಲಿ ಕೈಜೋಡಿಸಿದ್ದು ಬೆಳಕಿಗೆ ಬಂದಿದೆ. ಅವಿಶ್ವಾಸ ಗೊತ್ತುವಳಿ ಮತಕ್ಕೆ ಬಿದ್ದಾಗ ಇವರೆಲ್ಲ ವಿಪಕ್ಷ ಮೈತ್ರಿಯ ಗೊತ್ತುವಳಿ ಪರ ಮತ ಚಲಾಯಿಸಿದರು. ಇನ್ನುಳಿದಂತೆ, ಪಿಎಂಎಲ್-ಎನ್ ಪಕಷದ ನಾಯಕ ಶೆಹಬಾಜ್ ಷರೀಫ್, ಪಿಪಿಪಿ ನಾಯಕ ಆಸಿಫ್ ಅಲಿ ಜರ್ಧಾರಿ ( ಮೂರ ಸಲ ವಿಪಕ್ಷ ನಾಯಕ, 11ನೇ ರಾಷ್ಟ್ರಾಧ್ಯಕ್ಷ ಆಗಿದ್ದವರು), ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ಧಾರಿ, ಜಮೈತುಲ್ ಉಲೇಮಾ ಏ ಇಸ್ಲಾಮ್ (ಎಫ್)ನ ಮೌಲಾನಾ ಫಝುಲ್ ಉರ್ ರೆಹ್ಮಾನ್ ಪ್ರಮುಖರು.

    ಅಧಿಕೃತ ನಿವಾಸ ತೆರವು: ಅವಿಶ್ವಾಸ ಗೊತ್ತುವಳಿ ಮತದ ಫಲಿತಾಂಶ ಬರುವುದಕ್ಕೆ ಮುಂಚಿತವಾಗಿಯೇ ಪ್ರಧಾನಮಂತ್ರಿ ಅಧಿಕೃತ ನಿವಾಸವನ್ನು ಇಮ್ರಾನ್ ಖಾನ್ ತೆರವುಗೊಳಿಸಿದ್ದರು. ಸ್ಪೀಕರ್ ಅಸಾದ್ ಖೈಸರ್ ಅವರು ಅಧಿಕಾರವನ್ನು ಪಿಎಂಎಲ್ ಎನ್​ನ ಆಯಾಜ್ ಸಾದಿಕ್​ಗೆ ಹಸ್ತಾಂತರಿಸಿದರು.

    ಯಾರೂ ಪೂರ್ಣಾವಧಿ ಅಧಿಕಾರ ನಡೆಸಿಲ್ಲ: ಪಾಕಿಸ್ತಾನದ 75 ವರ್ಷಗಳ ಇತಿಹಾದಲ್ಲಿ ಇದುವರೆಗೂ ಯಾವುದೇ ಪ್ರಧಾನಿ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಿಲ್ಲ. 1947ರಿಂದ ಇಲ್ಲಿತನಕ 29 ಪ್ರಧಾನಮಂತ್ರಿಗಳು ಆಡಳಿತ ನಡೆಸಿದ್ದಾರೆ. 18 ಸಂದರ್ಭಗಳಲ್ಲಿ ಭ್ರಷ್ಟಾಚಾರ ಆರೋಪ, ನೇರ ಸೇನಾ ಕ್ರಾಂತಿ, ಆಡಳಿತ ಪಕ್ಷದೊಳಗಿನ ಭಿನ್ನಮತದ ಕಾರಣ ಪ್ರಧಾನಿ ರಾಜೀನಾಮೆ ನೀಡಬೇಕಾಗಿ ಬಂದಿದೆ. ಒಬ್ಬ ಪ್ರಧಾನಮಂತ್ರಿಯ ಹತ್ಯೆ ಆಗಿತ್ತು. ಉಳಿದವರು ಹಂಗಾಮಿ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದರು.

    ಸೇನಾ ಮುಖ್ಯಸ್ಥರ ಪದಚ್ಯುತಿ ಯತ್ನ: ನ್ಯಾಷನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಗೊತ್ತುವಳಿ ಮತಕ್ಕೆ 4 ಗಂಟೆ ಮೊದಲು ಇಮ್ರಾನ್ ಖಾನ್ ಬಹುದೊಡ್ಡ ತಪ್ಪೊಂದನ್ನು ಎಸಗಿದ್ದರು. ಪದಚ್ಯುತ ರಾಗುವ ಮುನ್ನ ಸೇನಾ ಮುಖ್ಯಸ್ಥ ಜನರಲ್ ಖಾಮರ್ ಬೆಜ್ವಾ ಅವರನ್ನು ಪದಚ್ಯುತಗೊಳಿಸಿ ಅಲ್ಲಿಗೆ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ನೇಮಕ ಮಾಡಲು ಆದೇಶ ಸಿದ್ಧಗೊಳಿಸಿದ್ದರು. ಇದು ರಕ್ಷಣಾ ಸಚಿವಾಲಯದಿಂದ ಕಾನೂನು ಸಚಿವಾಲಯಕ್ಕೆ ತಲುಪಿ ಅಲ್ಲಿಂದ ಪ್ರಧಾನಿ, ನಂತರ ಪ್ರೆಸಿಡೆಂಟ್ ಅಂಕಿತಕ್ಕೆ ತಲುಪಬೇಕಾಗಿತ್ತು. ಆದರೆ, ಇದರ ಸುಳಿವು ಬೆಜ್ವಾಗೆ ಸಿಕ್ಕಿದ ಕಾರಣ, ಅವರು ಈ ಆದೇಶಗಳನ್ನು ತಡೆದರು. ಅಲ್ಲದೆ, ರಾತ್ರಿ 9 ಗಂಟೆಗೆ ಜನರಲ್ ಬೆಜ್ವಾ ಮತ್ತು ಐಎಸ್​ಐ ಮುಖ್ಯಸ್ಥ ನದೀಂ ಅಂಜುಂ ಪ್ರಧಾನಿ ನಿವಾಸಕ್ಕೆ ತಲುಪಿದ್ದರು. ಪ್ರಧಾನಿ ನಿವಾಸದ ಎದುರು 36 ಸೇನಾ ವಾಹನ ಜಮಾಯಿಸಿದ್ದವು.

    ಬಂಧನಕ್ಕೂ ನಡೆದಿತ್ತು ಸಿದ್ಧತೆ: ನ್ಯಾಷನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಗೊತ್ತುವಳಿ ಮತಕ್ಕೆ ಹಾಕದೇ ಇದ್ದರೆ ಮುಂದೇನು? ಎಂಬುದನ್ನು ನಿರ್ಣಯಿಸಲು ಪಾಕಿಸ್ತಾನ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ಎಲ್ಲವೂ ಜಾಗೃತಾವಸ್ಥೆಯಲ್ಲಿದ್ದವು. ವಿದೇಶಿ ಪಿತೂರಿ ಆರೋಪ ವಿಚಾರಣೆಗೆ ಮುಂದಾಗಿದ್ದವು. ಅಲ್ಲದೆ, ಪ್ರಧಾನಿ ಇಮ್ರಾನ್ ಖಾನ್, ಡೆಪ್ಯೂಟಿ ಸ್ಪೀರಕರರ್ ಖಾಸಿಂ ಬಂಧನಕ್ಕೆ ಸಿದ್ಧತೆಗಳು ನಡೆದಿದ್ದವು. ಆದರೆ, ಸ್ಪೀಕರ್ ಅಸಾದ್ ಖೈಸರ್ ಅವಿಶ್ವಾಸ ಗೊತ್ತುವಳಿ ಮತಕ್ಕೆ ಹಾಕಿ ಎಲ್ಲವನ್ನು ನಿರಾಳಗೊಳಿಸಿದರು.

    ಕ್ಷಮೆ ಕೋರಿದ್ದಕ್ಕೆ ತಪ್ಪಿತು ಬಂಧನ: ಸೇನಾ ಮುಖ್ಯಸ್ಥ ಬಾಜ್ವಾ ಅವರನ್ನು ಪದಚ್ಯುತಗೊಳಿಸಿ ಫೈಜ್​ರನ್ನು ನೇಮಕ ಮಾಡಿದರೆ, ಮುತ್ತಾಹಿದಾ ಖ್ವಾಮಿ ಮೂಮೆಂಟ್, ಬಲೂಚಿಸ್ತಾನ್ ಅವಾಮಿ ಪಾರ್ಟಿ, ಅಖ್ತರ್ ಮಂಗಲ್ ಗ್ರೂಪ್ ಸದಸ್ಯರ ಬೆಂಬಲ ಪಡೆದು ಸರ್ಕಾರ ಪತನವಾಗದಂತೆ ತಡೆಯುವುದು ಇಮ್ರಾನ್ ಖಾನ್ ರಣತಂತ್ರವಾಗಿತ್ತು. ಆದರೆ ಇದು ಫಲಕೊಡಲಿಲ್ಲ. ಸೋಲಿನ ಅರಿವಾಗುತ್ತಲೇ ಇಮ್ರಾನ್ ಖಾನ್ ಅವರು ಬೆಜ್ವಾ ಅವರ ಕ್ಷಮೆಯಾಚಿಸಿದ ಕಾರಣ ಬಂಧನದಿಂದ ಬಚಾವ್ ಆದರು.

    ಸಂಕಷ್ಟದ ಪಥ

    2021

    • ನ. 28: ಪ್ರಧಾನಿ ಇಮ್ರಾನ್ ಖಾನ್ ಪದಚ್ಯುತಿಗೆ ಬೇಕಾದಷ್ಟು ಬೆಂಬಲ ವಿಪಕ್ಷಕ್ಕೆ ಇದೆ. ಶೀಘ್ರವೇ ಸಂಸತ್​ನೊಳಗೊಂದು ಬದಲಾವಣೆ ನಿರೀಕ್ಷಿಸಬಹುದು ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕ ಖುರ್ಷೀದ್ ಷಾ ಸುಳಿವು ನೀಡಿದರು.
    • ಡಿ.24: ಪಿಎಂಎಲ್-ಎನ್ ನಾಯಕ ಅಯಾಜ್ ಸಾದಿಕ್ ಕೂಡ ಇಂಥದ್ದೇ ಬದಲಾವಣೆಯ ಸುಳಿವನ್ನು ಕೊಟ್ಟರು.
    • 2022 ಜ.11: ಸರ್ಕಾರ ಬಹುಮತ ಕಳೆದುಕೊಂಡಿದೆ. ಸಂಸತ್​ನಲ್ಲಿ ಬದಲಾವಣೆ ನಿರೀಕ್ಷಿಸಿ ಎಂದು ಹೇಳಿದ ಪಿಎಂಎಲ್-ಎನ್ ನಾಯಕ ಖ್ವಾಜಾ ಆಸಿಫ್.
    • ಜ.21: ಪ್ರಧಾನಮಂತ್ರಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದಕ್ಕೆ ವಿಪಕ್ಷಗಳು ಸಿದ್ಧವಾಗಿವೆ ಎಂದು ಹೇಳಿದ ಅಯಾಜ್ ಸಾದಿಕ್.
    • ಫೆ.7: ಪಿಎಂ ಇಮ್ರಾನ್ ಖಾನ್ ಪದಚ್ಯುತಿ ವಿಚಾರವಾಗಿ ಪಿಎಂಎಲ್- ಎನ್, ಪಿಪಿಪಿ ನಾಯಕರು ಅಧಿಕೃತವಾಗಿ ಚರ್ಚೆ ನಡೆಸಿದರು.
    • ಫೆ.8: ಎಂಕ್ಯೂಎಂ -ಪಿ ನಾಯಕ ಆಮಿರ್ ಖಾನ್​ಗೆ ಅವಿಶ್ವಾಸ ಗೊತ್ತುವಳಿ ಮಂಡನೆ ವಿಚಾರ ಪ್ರಸ್ತಾಪಿಸಿ ಬೆಂಬಲ ಕೋರಿದ ಶಹಬಾಜ್.
    • ಫೆ.11: ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ಘೊಷಿಸಿದ ಪಾಕಿಸ್ತಾನ ಡೆಮಾಕ್ರಟಿಕ್ ಮೂವ್​ವೆುಂಟ್ (ಪಿಡಿಎಂ) ಮುಖ್ಯಸ್ಥ ಮೌಲಾನ ಫಝುಲ್ ಉರ್ ರೆಹ್ಮಾನ್.
    • ಮಾ.8: ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಕೊನೆಗೂ ಮಂಡಿಸಿದ ವಿಪಕ್ಷ ಮೈತ್ರಿ
    • ಮಾ.12: ಲಂಡನ್​ನಲ್ಲಿ ನವಾಜ್ ಷರೀಫ್ ಮತ್ತು ಪಿಟಿಐ ನಾಯಕ ಅಲೀಂ ಖಾನ್ ಈ ವಿದ್ಯಮಾನದ ಬಗ್ಗೆ ಮಾತುಕತೆ ನಡೆಸಿದರು.
    • ಮಾ.21: ಸುಪ್ರೀಂ ಕೋರ್ಟ್​ನಲ್ಲಿ ಸಂವಿಧಾನದ ಅನುಚ್ಛೇದ 63(ಎ) ವಿಚಾರ ಪ್ರತಿಪಾದಿಸಿದ ಇಮ್ರಾನ್ ಖಾನ್ ಸರ್ಕಾರ.
    • ಮಾ.27: ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯು ವಿದೇಶಿ ಪಿತೂರಿಞಞಯ ಭಾಗ ಎಂದು ಆರೋಪಿಸಿದ ಪ್ರಧಾನಮಂತ್ರಿ ಇಮ್ರಾನ್ ಖಾನ್
    • ಮಾ.28: ನ್ಯಾಷನಲ್ ಅಸೆಂಬ್ಲಿಯಲ್ಲಿ ವಿಪಕ್ಷ ನಾಯಕ ಶಹಬಾಜ್ ಷರೀಫ್ ಅವರು ವಿಪಕ್ಷ ಸಿದ್ಧಪಡಿಸಿದ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದರು.
    • ಮಾ.31: ನ್ಯಾಷನಲ್ ಅಸೆಂಬ್ಲಿಯಲ್ಲಿ ಮಂಡನೆಯಾದ ಅವಿಶ್ವಾಸಗೊತ್ತುವಳಿ ಕುರಿತ ಗದ್ದಲದ ಕಾರಣ ಕಲಾಪ ಏ.3ಕ್ಕೆ ಮುಂದೂಡಿಕೆ.
    • ಏ.3: ಅವಿಶ್ವಾಸ ಗೊತ್ತುವಳಿ ತಿರಸ್ಕರಿಸಿ ಡೆಪ್ಯುಟಿ ಸ್ಪೀಕರ್. ಪ್ರಧಾನಿ ಖಾನ್ ಶಿಫಾರಸಿನ ಪ್ರಕಾರ, ಪ್ರೆಸಿಡೆಂಟ್ ಆರಿಫ್ ಖಾನ್ ಅಸೆಂಬ್ಲಿಯನ್ನು ವಿಸರ್ಜಿಸಿದರು.
    • ಏ.7: ನ್ಯಾಷನಲ್ ಅಸೆಂಬ್ಲಿ ಪುನಸ್ಥಾಪಿಸಿದ ಸುಪ್ರೀಂ ಕೋರ್ಟ್. ಏ.9ರಂದು ಅವಿಶ್ವಾಸ ಮತಕ್ಕೆ ಆದೇಶ.
    • ಏ.9: ನ್ಯಾಷನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಗೊತ್ತುವಳಿ ಮತಕ್ಕೆ ಪ್ರಯತ್ನ ನಡೆಯಿತು. ತಡರಾತ್ರಿ ತನಕವೂ ಹೈಡ್ರಾಮಾ ನಡೆಯಿತು. ಸಾಧ್ಯವಾದಷ್ಟು ಮತದಾನವನ್ನು ವಿಳಂಬಗೊಳಿಸುವ ಪ್ರಯತ್ನವಾಯಿತು.
    • ಏ.10: ಶನಿವಾರ ತಡರಾತ್ರಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮತಕ್ಕೆ. ಸರ್ಕಾರಕ್ಕೆ ಸೋಲು. ಇಮ್ರಾನ್ ಖಾನ್ ಪದಚ್ಯುತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts