

ಬಳ್ಳಾರಿ: ಹೋದೆಯಾ ಪಿಶಾಚಿ ಅಂದ್ರೆ ಬಂತು ಗವಾಕ್ಷೀಲಿ ಅನ್ನುವಂತೆ ಮಹಾಮಾರಿ ಕರೊನಾ ವೈರಸ್ ಒಮಿಕ್ರಾನ್ ರೂಪದಲ್ಲಿ ಮತ್ತೆ ದೇಶಕ್ಕೆ ಎಂಟ್ರಿ ನೀಡಿದೆ. ದಿನದಿಂದ ದಿನಕ್ಕೆ ಒಮಿಕ್ರಾನ್ ವೇಗವಾಗಿ ಹರಡುತ್ತಿದ್ದು, ಮೂರನೇ ಅಲೆಯ ಭೀತಿಯ ನಡುವೆಯೇ ರಾಜ್ಯದ ಗಣಿನಾಡು ಬಳ್ಳಾರಿಯಲ್ಲಿ ನವಜಾತ ಶಿಶುಗಳು ಕಣ್ಮುಚ್ಚುತ್ತಿರುವುದು ಆತಂಕಕ್ಕೆ ಎಡೆ ಮಾಡಿದೆ.
ಹೌದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೇವಲ 8 ತಿಂಗಳಲ್ಲಿ 350ಕ್ಕೂ ಅಧಿಕ ಕಂದಮ್ಮಗಳ ಸಾವು ಸಂಭವಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ 293 ಹಾಗೂ ವಿಜಯನಗರ ಜಿಲ್ಲೆಯಲ್ಲಿ 65 ಶಿಶುಗಳ ಸಾವಾಗಿದೆ.
ಬಳ್ಳಾರಿಯ ಪ್ರತಿಷ್ಠಿತ ವಿಮ್ಸ್ ಆಸ್ಪತ್ರೆಯಲ್ಲಿ 290ಕ್ಕೂ ಅಧಿಕ ಕಂದಮ್ಮಗಳು ಮೃತಪಟ್ಟಿವೆ. ಸರಾಸರಿ ದಿನಕ್ಕೆ 3 ಹಸುಗೂಸುಗಳು ಸಾವಿಗೀಡಾಗಿವೆ. ಹಸುಗೂಸುಗಳ ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೂ ಕೂಡ ಆರೋಗ್ಯ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ. ಗ್ರಾಮೀಣ ಭಾಗದ ಗರ್ಭಿಣಿಯರು ಆಸ್ಪತ್ರೆಗೆ ಬರುವ ಮುನ್ನವೇ ಕಂದಮ್ಮಗಳು ಕಣ್ಮುಚ್ಚುತ್ತಿವೆ.
ಸರ್ಕಾರ ಹಸುಗೂಸುಗಳ ಸಾವಿನ ಪ್ರಮಾಣ ಕಡಿಮೆ ಮಾಡಲು ಸಾಕಷ್ಟು ಯೋಜನೆಗಳನ್ನು ತಂದರೂ ಪ್ರಯೋಜನವಾಗುತ್ತಿಲ್ಲ. ಶಿಶುಗಳು ಮೃತಪಡುತ್ತಿರುವುದನ್ನು ಬಳ್ಳಾರಿಯ ವಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ ಅನಿಲ್‌ಕುಮಾರ್ ಖಚಿತಪಡಿಸಿದ್ದಾರೆ.