

ಬೆಂಗಳೂರು: ಇಂಜಿನಿಯರಿಂಗ್ ಓದಿ, ಕಾಲೇಜುಗಳಲ್ಲಿ ಸೆಕ್ಯುರಿಟಿ ಕೆಲಸ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಹೈಟೆಕ್ ಖದೀಮನನ್ನು ನಗರದ ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಒಡಿಶಾ ಮೂಲದ ರಾಜಪಾತ್ರ ಎಂದು ಗುರುತಿಸಲಾಗಿದೆ. ಕಾಲೇಜುಗಳಲ್ಲಿ ಕಂಪ್ಯೂಟರ್ ಬಿಡಿಭಾಗಗಳ ಕಳ್ಳತನವೇ ಈತನ ಟಾರ್ಗೆಟ್ ಆಗಿತ್ತು. ಸುಮಾರು 40 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾನೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಸೇರಿದ ಪ್ರತಿಷ್ಠಿತ ಬಿಜು ಲರ್ನಿಂಗ್ ಇನ್ಸ್ಟಿಟ್ಯೂಟ್ನಲ್ಲೂ ಈತನ ಕೈಚಳಕ ನಡೆದಿದೆ. ಬಳಿಕ ಬೆಂಗಳೂರಿನ ಬಾಗಲೂರಿನ ಸಿಎಂಆರ್ ಕಾಲೇಜಿನಲ್ಲಿಯೂ ಇದೇ ರೀತಿ ಕೃತ್ಯ ಎಸಗಿದ್ದಾನೆ. 20 ಲಕ್ಷ ಮೌಲ್ಯದ ಕಂಪ್ಯೂಟರ್ ಉಪಕರಣಗಳನ್ನು ಕದ್ದಿದ್ದಾನೆ.
ಇಂಜಿನಿಯರಿಂಗ್ ಓದಿರುವ ಈತ ಮೊದಲು ಯಾವ ಕಾಲೇಜಿನಲ್ಲಿ ಎಷ್ಟು ಕಂಪ್ಯೂಟರ್ಗಳಿವೆ ಎಂದು ಮಾಹಿತಿ ಸಂಗ್ರಹಿಸುತ್ತಿದ್ದ. ಬಳಿಕ ಸುಳ್ಳುಗಳನ್ನು ಹೇಳಿಕೊಂಡು ಆ ಕಾಲೇಜಿಗಳಿಗೆ ತೆರಳಿ ಸೆಕ್ಯುರಿಟಿ ಕೆಲಸ ಕೇಳುತ್ತಿದ್ದ. ಕೆಲಸಕ್ಕೆ ಸೇರಿದ ಎರಡೇ ದಿನದಲ್ಲಿ ಕಂಪ್ಯೂಟರ್ನ ಪ್ರೊಸೆಸರ್, ರ್ಯಾಮ್ಗಳಿಗೆ ಕನ್ನ ಹಾಕಿ, ತನ್ನ ವೆಬ್ನಲ್ಲಿ ತನ್ನದೇ ಕಂಪನಿ ತೆರೆದು, ಕದ್ದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ.
ಆ ವೆಬ್ ಕಂಪೆನಿಗೆ ತಾನೇ ಡೈರೆಕ್ಟರ್ ಅಂತ ಹೇಳಿಕೊಂಡಿದ್ದ ಈತ ವೆಬ್ಸೈಟ್ನಲ್ಲಿ ಅತಿ ಕಡಿಮೆ ಬೆಲೆಗೆ ಕಂಪ್ಯೂಟರ್ ರ್ಯಾಮ್, ಪ್ರೊಸೆಸರ್ ಹಾಗೂ ಹಾರ್ಡ್ ಡಿಸ್ಕ್ ಅನ್ನು ಸೇಲ್ ಮಾಡುವುದಾಗಿ ಜಾಹಿರಾತು ನೀಡಿದ್ದ. ಸದ್ಯ ಆರೋಪಿ ರಾಜಪಾತ್ರನನ್ನು ಬಂಧಿಸಿರುವ ಪೊಲೀಸರು 40 ಲಕ್ಷ ರೂ. ಮೌಲ್ಯದ ಕಂಪ್ಯೂಟರ್ ಹಾಗೂ ಕಂಪ್ಯೂಟರ್ಗೆ ಸಂಬಂಧಿಸಿದ ಸಾಧನಗಳನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ಬಾಯ್ಬಿಟ್ಟಿರುವ ಈತ ತಂಗಿ ಮದುವೆಗೆ ಹಣ ಹೊಂದಿಸಲು ಕಳ್ಳತನ ಮಾಡುತ್ತಿದ್ದಾಗಿ ಹೇಳಿಕೊಂಡಿದ್ದಾನೆ. ಸರ್.. ಚಿನ್ನಾಭರಣ ಕದ್ದು, ಅದರಿಂದ ಹಣ ಪಡೆಯೋದು ಕಷ್ಟ. ಹೀಗಾಗಿ, ಕಂಪ್ಯೂಟರ್ ಉಪಕರಣ ಕದ್ದು, ಆನ್ಲೈನ್ನಲ್ಲಿ ಮಾರಾಟ ಮಾಡುತ್ತಿದ್ದೆ. ನನ್ನ ಕಂಪೆನಿ ಲಾಸ್ ಅಲ್ಲಿದೆ, ಅದಕ್ಕೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಹೇಳುತ್ತಿದೆ ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ. ಸದ್ಯ ಬೆಂಗಳೂರಿಗೆ ಬಂದಿರುವ ಒಡಿಶಾ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)