ಮೈಸೂರು ಗ್ಯಾಂಗ್​ರೇಪ್​ ಕೇಸ್​: ಗಂಡಸರು...ಗಂಡಸರಲ್ಲವೇ ಎಂದು ನಟಿ ರಮ್ಯಾ ವ್ಯಂಗ್ಯ..!

Ramya
Published on

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಗ್ಯಾಂಗ್​ರೇಪ್ ಪ್ರಕರಣ ಸಂಬಂಧ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅಲಿಯಾಸ್​ ದಿವ್ಯ ಸ್ಪಂದನಾ ಅವರು ಆಕ್ರೋಶ ಹೊರಹಾಕಿದ್ದಾರೆ.

ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ರಮ್ಯಾ, ಮಹಿಳೆಯ ಮೇಲೆ ಪುರುಷ ನಡೆಸುವ ಎಲ್ಲ ದೌರ್ಜನ್ಯಗಳಿಗೂ ಮಹಿಳೆಯನ್ನೇ ಹೊಣೆ ಮಾಡಲಾಗುತ್ತದೆ. ಆತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರಬಹುದು ಅಥವಾ ಹಲ್ಲೆ ಮಾಡಿರಬಹುದು, ನಿಂದಿಸಿರಬಹುದು... ಆದರೆ, ಅದು ನಿನ್ನ ತಪ್ಪು, ನೀನು ಆ ರೀತಿ ಹೇಳಬಾರದಿತ್ತು, ನೀನು ಹಾಗೆ ಮಾಡಬಾರದಿತ್ತು, ನೀನು ಆ ಬಟ್ಟೆ ಹಾಕಬಾರದಿತ್ತು, ತುಂಬಾ ಚಿಕ್ಕದಾಯ್ತು, ತುಂಬಾ ಉದ್ದ ಆಯ್ತು, ತಡ ರಾತ್ರಿ ನೀನು ಹೊರಗೆ ಹೋಗಬಾರದಿತ್ತು, ಮೇಕಪ್ ಹಾಕಬಾರದಿತ್ತು, ಕೆಂಪು ಲಿಪ್ ಸ್ಟಿಕ್ ಯಾಕೆ? ನೀನು ಕಣ್ಣು ಮಿಟುಕಿಸಬಾರದಿತ್ತು, ನಿನ್ನ ಬಳಿ ಅದು ಇರಬಾರದು, ಇದು ಇರಬಾರದು...ಯಾಕೆ ? ಏಕೆಂದರೆ, ಗಂಡಸರು, ಗಂಡಸರಲ್ಲವೇ... ಅದಕ್ಕೆ ನಾವು ಹೆಂಗಸರು ಕಾಂಪ್ರಮೈಸ್ ಮಾಡಿಕೊಳ್ಳಬೇಕು, ಅಡ್ಜಸ್ಟ್ ಮಾಡಿಕೊಳ್ಳಬೇಕು, ನಾವೇ ಬದಲಾಗಬೇಕು, ಎದುರಿಸಬೇಕು... ಆದರೆ, ಅದು ಸಾಧ್ಯವಿಲ್ಲ, ಈ ಮನಸ್ಥಿತಿಗೆ ಪೂರ್ಣವಿರಾಮ ಆಡಲೇಬೇಕು ಎಂದು ರಮ್ಯಾ ಸುದೀರ್ಘವಾಗಿ ಪುರುಷ ಪ್ರಧಾನ ಸಮಾಜಕ ದಬ್ಬಾಳಿಕೆಗಳನ್ನು ಉಲ್ಲೇಖಿಸಿ ಆಕ್ರೋಶ ಹೊರಹಾಕಿದ್ದಾರೆ.

ನಿಜ ಹೇಳಬೇಕು ಅಂದರೆ, ನಾನೂ ಇದೇ ರೀತಿ ಇದ್ದೆ, ಆರೋಪ ಹೊತ್ತಿದ್ದೆ, ಆದರೆ ಇನ್ನು ಮುಂದೆ ಹೀಗಿರಲ್ಲ. ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಕುರುಡಾಗದಿರಿ... ದೌರ್ಜನ್ಯದ ಬಗ್ಗೆ ತುಟಿ ಬಿಚ್ಚಿ ಎನ್ನುತ್ತಾ ಓಪನ್ ಲೆಟರ್ ಮೂಲಕ ಇನ್​ಸ್ಟಾಗ್ರಾಂನಲ್ಲಿ ಮೈಸೂರಿನ ಘಟನೆಯನ್ನು ಖಂಡಿಸಿದ್ದಾರೆ.

ಸಂತ್ರಸ್ತೆ ಆ ಹೊತ್ತಿನಲ್ಲಿ ಅಲ್ಲಿಗೆ ಹೋಗಬಾರದಿತ್ತು ಎಂದು ನಿನ್ನೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿದ ಹೇಳಿಕೆ ಸಾಕಷ್ಟು ವಿವಾದಕ್ಕೀಡಾಯಿತು. ರಾಜ್ಯಾದ್ಯಂತ ತೀವ್ರ ಟೀಕೆಗಳು ವ್ಯಕ್ತವಾಯಿತು. ಅದರ ಬೆನ್ನಲ್ಲೇ ಗೃಹ ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾರೆ. ಇದೀಗ ರಮ್ಯಾ ಅವರು ಪೋಸ್ಟ್​ ಮೂಲಕ ತಿರುಗೇಟು ನೀಡಿದಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net