ಐಎಎಸ್-ಐಪಿಎಸ್​ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧಕ್ಕೆ ಸಂಸದ ಪ್ರತಾಪ್​ ಸಿಂಹ ಒತ್ತಾಯ..!

rohini sinduri- pratap simha
Published on

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಅವರ ವಾಕ್ಸಮರ ಮುಂದುವರಿದಿದ್ದು, ಐಎಎಸ್ ಹಾಗೂ ಐಪಿಎಸ್​ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧಕ್ಕೆ ಒತ್ತಾಯಿಸಿದ್ದಾರೆ.

ಮೈಸೂರಿನ ಹೊರ ವಲಯದಲ್ಲಿ ನಡೆದ ಕೈಗಾರಿಕೋದ್ಯಮಿಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ್​ ಸಿಂಹ, ಫ್ಯಾನ್ಸ್ ಪೇಜ್ ನಿಷೇಧಿಸುವಂತೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿಗೆ ಮನವಿ ಮಾಡಿದರು.

ಐಎಎಸ್, ಐಪಿಎಸ್ ಅಧಿಕಾರಿಗಳು ಏನೂ ಕೆಲಸ ಮಾಡದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಅಧಿಕಾರಿಗಳು ಮಾಡಿದ ಕೆಲಸಗಳನ್ನು ಜಿಲ್ಲಾಡಳಿತದ ಅಕೌಂಟ್ ತೆರೆದು ಅದರಲ್ಲೂ ಮಾಹಿತಿ ಹಾಕಲಿ ಎಂದರು.

ಫ್ಯಾನ್ಸ್ ಪೇಜ್​ಗಳಿಂದ ಹೊಗಳಿಕೆಗಳು ಸೃಷ್ಟಿಯಾಗಿದೆ. ಯಾರೋ ಒಬ್ಬ ಲಾಠಿ ಹಿಡಿದು ಓಡಾಡಿದ್ರೆ ಹಾಗೆ-ಹೀಗೆ ಅಂತ ಬಿಂಬಿಸಲಾಗ್ತಿದೆ. ಐಎಎಸ್, ಐಪಿಎಸ್ ಅಧಿಕಾರಿಗಳು ಉತ್ತಮ ಕೆಲಸಗಳನ್ನು ಮಾಡಬೇಕು. ಹಾಸನದಲ್ಲಿ ಕೇಂದ್ರ ಸರ್ಕಾರದಿಂದ ರಸ್ತೆ ನಿರ್ಮಾಣ ಮಾಡಬೇಕಾದರೆ ಅಂದಿನ ಜಿಲ್ಲಾಧಿಕಾರಿ ಸಹಕಾರ ನೀಡಲೇ ಇಲ್ಲ ಎಂದು ಹೆಸರೆಳದೇ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.

ನನಗೆ ಎಸ್.ಎಂ. ಕೃಷ್ಣ ಅವರಂತಹ ಮುಖ್ಯಮಂತ್ರಿ ಇಷ್ಟ. ಅವರು ರಾಜ್ಯದ ಸಿಎಂ ಆಗಿದ್ದಾಗ ಕೈಗಾರಿಕೆ ಬೆಳವಣಿಗೆಗೆ ಉತ್ತೇಜನ ನೀಡಿದ್ದರು. ಕೃಷ್ಣ ಅವರ ಮುಂದಾಲೋಚನೆ ಕೆಲಸಗಳನ್ನು ಅನುಸರಿಸಬೇಕು. ನಾನು ಬಿಜೆಪಿಯವನಾಗಿರಬಹುದು. ಆದರೂ ನಾನು ಎಲ್ಲ ಮುಖ್ಯಮಂತ್ರಿಗಳಿಗಿಂತ ಎಸ್.ಎಂ ಕೃಷ್ಣ ಅವರನ್ನು ಬಹಳ ಇಷ್ಟ ಪಡ್ತೇನೆ. ಅವರ ಕಾರ್ಯವೈಖರಿ ನನಗೆ ವೈಯಕ್ತಿಕವಾಗಿ ಇಷ್ಟ. ನಾನು ಹಣ ಮಾಡಲು ಬಂದಿಲ್ಲ ಮುಂದಿನ ವರ್ಷಕ್ಕೆ ಮೈಸೂರು-ಬೆಂಗಳೂರು ದಶಪಥ ರಸ್ತೆ ಮೈಸೂರು-ಮಡಿಕೇರಿ ರಸ್ತೆಗಳನ್ನು ನೀಡುತ್ತೇನೆಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net