ಅಕ್ರಮ ಸಂಬಂಧಕ್ಕೆ ಬಿತ್ತು ಎರಡು ಹೆಣ: ಪ್ರೇಯಸಿ ಶವ ಹೂತಿಟ್ಟು ನೇಣಿಗೆ ಶರಣಾದ ಪ್ರಿಯಕರ

Mys Couple
Published on

ಮೈಸೂರು: ಅಕ್ರಮ ಸಂಬಂಧಕ್ಕೆ ಎರಡು ಜೀವಗಳು ಬಲಿಯಾಗಿವೆ. ಪ್ರಿಯಕರನೊಬ್ಬ ಪ್ರೇಯಸಿಯ ಶವನ್ನು ಹೂತಿಟ್ಟು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ತಿ.ನರಸೀಪುರ ತಾಲ್ಲೂಕಿನ ತಲಕಾಡು ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ.

ಸಿದ್ದರಾಜು ಹಾಗೂ ಸುಮಿತ್ರಾ ಮೃತ ದುರ್ದೈವಿಗಳು. ಇದೀಗ ಇಬ್ಬರ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಇಬ್ಬರು ಕೂಡ ಟಿ. ನರಸೀಪುರ ತಾಲ್ಲೂಕಿನ ಎಂ.ಕೆಬ್ಬೆಹುಂಡಿ ಗ್ರಾಮದ ನಿವಾಸಿಗಳು. ಸಿದ್ದರಾಜು ನೇಣು ಬಿಗಿದುಕೊಂಡಿರುವ ಸ್ಥಳದಲ್ಲೇ ಸುಮಿತ್ರಾಳ ಶವವನ್ನು ಸಿದ್ದರಾಜು ಹೂತಿಟ್ಟಿದ್ದಾನೆ.

ಪೊಲೀಸ್​ ಮೂಗಳ ಪ್ರಕಾರ ಹಲವು ವರ್ಷಗಳಿಂದ ಸುಮಿತ್ರಾ ಮತ್ತು ಸಿದ್ದರಾಜು ಅಕ್ರಮ ಸಂಬಂಧ ಹೊಂದಿದ್ದರು. ಕಳೆದ ಶನಿವಾರ ಸಿದ್ದರಾಜು, ಸುಮಿತ್ರಾ ಜೊತೆ ತಲಕಾಡಿಗೆ ತೆರಳಿದ್ದ. ಇದಾದ ಬಳಿಕ ಇಬ್ಬರು ಹೆಣವಾಗಿ ಪತ್ತೆಯಾಗಿದ್ದಾರೆ. ಈ ಹಿಂದೆಯು ಅನೇಕ ಬಾರಿ ಸಿದ್ದರಾಜು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ.

ಸಾಯುವ ಮುನ್ನ ಕೊನೆಯದಾಗಿ ತಮ್ಮದೇ ಗ್ರಾಮದ ನಿಂಗರಾಜು ಎಂಬುವರಿಗೆ ಸಿದ್ದರಾಜು ವಾಟ್ಸಾಪ್ ವಾಯ್ಸ್ ಮೆಸೇಜ್ ಮಾಡಿದ್ದಾನೆ. ಇಬ್ಬರು ಮಾತನಾಡಿಕೊಂಡು ಚೆನ್ನಾಗಿಯೇ ಇದ್ದೆವು. ಕಷ್ಟ ಸುಖ ಮಾತಾಡಿಕೊಂಡು ನಾನು ತೆಗೆದುಕೊಂಡು ಬಂದಿದ್ದ ಸ್ನ್ಯಾಕ್ಸ್​ ತಿಂದುಕೊಂಡು ಆರಾಮಾಗಿ ಇದ್ದೆವು. ನಾನು ಆಕೆಯ ತೊಡೆಯ ಮೇಲೆ ಮಲಗಿದ್ದೆ. ಈ ವೇಳೆ ಇದ್ದಕ್ಕಿದ್ದಂತೆ ನನ್ನನ್ನು ಕೆಳಗಡೆ ತಳ್ಳಿದಳು. ಯಾಕೆ ಅಂತಾ ಪ್ರಶ್ನಿಸಿದ್ದಕ್ಕೆ, ಅವರ ಅಕ್ಕ ಆಕೆಯ ಮೈಮೇಲೆ ಬಂದು ಬಿಟ್ಟು ನಾನು ಸಾಯಬೇಕು ಅಂತಿದ್ದಳು. ತಕ್ಷಣ ನಾನು ದೇವಸ್ಥಾನದ ಬಳಿ ಹೋಗಿ ವಿಭೂತಿ ತಂದು ಹಣೆಗೆ ಹಚ್ಚಿದೆ. ಸುಸ್ತಾಗುತ್ತಿದೆ ನೀರು ತೆಗೆದುಕೊಂಡು ಬಾ ಎಂದು ಕೇಳಿದಳು. ನಾನು ಓಡಿ ಹೋಗಿ ನೀರು ತರುವಷ್ಟರಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಳು. ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಅದಕ್ಕೆ ಅಲ್ಲಿಯೆ ಪಕ್ಕದಲ್ಲಿ ಹೆಣ ಹೂತು ಹಾಕಿದೆ. ನನಗೆ ಅವಳನ್ನು ಬಿಟ್ಟು ಇರಲು ಆಗುವುದಿಲ್ಲ. ಅದಕ್ಕೆ ಅದೇ ಜಾಗದಲ್ಲಿ ನಾನು ಸಾಯುತ್ತಿದ್ದೇನೆ ಎಂದು ವಾಯ್ಸ್​ ಮೆಸೇಜ್​ ಕಳುಹಿಸಿ ಸಿದ್ದರಾಜು ನೇಣಿಗೆ ಶರಣಾಗಿದ್ದಾನೆ. ಸಾಯುವ ಮುನ್ನ ಪ್ರೇಯಸಿಯನ್ನು ಮಣ್ಣು ಮಾಡಿರುವ ಜಾಗದ ಬಗ್ಗೆಯೂ ತಿಳಿಸಿದ್ದಾನೆ.

ಸದ್ಯ ಘಟನಾ ಸ್ಥಳಕ್ಕೆ ತಲಕಾಡು ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net