

ಮೈಸೂರು: ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮೇಲುಗೈ ಸಾಧಿಸಲೂ ಹೈಕಮಾಂಡ್ ತೀರ್ಮಾನ ಸಿದ್ದರಾಮಯ್ಯಗೆ ತೊಡಕಾಗಿದೆ.
ಮೈಸೂರು ಜಿಲ್ಲೆಯಲ್ಲೇ ಮೂರು ಕುಟುಂಬಗಳು ಕಾಂಗ್ರೆಸ್ನಿಂದ ಜೋಡಿ ಟಿಕೆಟ್‌ಗೆ ಟವೆಲ್ ಹಾಕಿವೆ. 11 ರಲ್ಲಿ 6 ಕ್ಷೇತ್ರಗಳು ಅಪ್ಪ-ಮಕ್ಕಳಿಗೆ ದಕ್ಕುತ್ತವಾ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಸ್ವತಃ ಸಿದ್ದರಾಮಯ್ಯ ಮನೆಯಲ್ಲೇ ತಂದೆ ಮಕ್ಕಳಿಗೆ ಟಿಕೆಟ್ ಬೇಕಿದೆ. ಸಿದ್ದರಾಮಯ್ಯ ಅವರ ಪುತ್ರ ಸದ್ಯ ವರುಣಾ ಕ್ಷೇತ್ರದ ಶಾಸಕ ಆಗಿದ್ದಾರೆ.
ಹೆಚ್‌ಸಿ.ಮಹದೇವಪ್ಪ ಹಾಗೂ ಮಗ ಸುನೀಲ್ ಬೋಸ್ ಇಬ್ಬರೂ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದ್ದಾರೆ. ಇಬ್ಬರು ಟಿ.ನರಸೀಪುರ ಹಾಗೂ ನಂಜನಗೂಡು ಕ್ಷೇತ್ರಗಳ ಮೇಲೆ ಕಣ್ಣು ಹಾಕಿದ್ದಾರೆ. ಇತ್ತ ಜಿ.ಟಿ.ದೇವೇಗೌಡ ಕೂಡ ಕಾಂಗ್ರೆಸ್‌ಗೆ ಸೇರುವ ಮುನ್ನವೇ ಚುನಾವಣೆಯಲ್ಲಿ ಎರಡು ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಚಾಮುಂಡೇಶ್ವರಿಯಲ್ಲಿ ತಮಗೆ, ಮಗನಿಗೆ ಪಕ್ಕದ ಕ್ಷೇತ್ರಗಳಲ್ಲಿ ಅವಕಾಶಕ್ಕೆ ಬೇಡಿಕೆ ಇಟ್ಟಿದ್ದಾರೆ.
ಜಿಟಿಡಿ ಬಂದರೆ ಹಳೇ ಮೈಸೂರು ಭಾಗದಲ್ಲಿ ಕೈ ಬಲಗೊಳ್ಳಲಿದೆ ಎಂಬ ಲೆಕ್ಕಾಚಾರವಿದೆ. ಜೆಡಿಎಸ್ ಹಣಿಯಲು ಕಾಂಗ್ರೆಸ್‌ಗೆ ಜಿಟಿಡಿ ದೊಡ್ಡ ಅಸ್ತ್ರ ಎಂಬುದು ಸಿದ್ದು ಲೆಕ್ಕ. ಅಲ್ಲದೆ, ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು. ಆ ಮೂಲಕ ಪಕ್ಷದಲ್ಲೇ ಡಿಕೆಶಿ ವಿರುದ್ಧ ಮೇಲುಗೈ ಸಾಧಿಸುವ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಇದ್ದರು. ಆದರೆ, ಈಗ ಹೈಕಮಾಂಡ್ ತೀರ್ಮಾನದಿಂದ ಸಿದ್ದರಾಮಯ್ಯಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. (ದಿಗ್ವಿಜಯ ನ್ಯೂಸ್)