ಬಿ.ಎಲ್​. ಸಂತೋಷ್​ ಹೇಳಿಕೆಯಿಂದ ಬಿಜೆಪಿ ಶಾಸಕರು ಹಾಗೂ ಸಚಿವರ ಎದೆಯಲ್ಲಿ ಶುರುವಾಯ್ತು ಭಯ!

B L Santhosh
Published on

ಮೈಸೂರು: ಬಿಜೆಪಿಗೆ ದೇಶಾದ್ಯಂತ ರಾಜಕೀಯ ಯಶಸ್ಸು ಸಿಗುತ್ತಿದೆ. 18 ರಾಜ್ಯಗಳಲ್ಲಿ‌ ಬಿಜೆಪಿ ಅಧಿಕಾರದಲ್ಲಿದೆ. ದೇಶದಲ್ಲಿ ಕನಸು ಕಾಣದಷ್ಟು ದೊಡ್ಡ ಮಟ್ಟದಲ್ಲಿ ಬಿಜೆಪಿ ಬೆಳೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

ಮೈಸೂರಿನ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಸಂತೋಷ್, ಅನೇಕ ರಾಜ್ಯಗಳಲ್ಲಿ ಬಿಜೆಪಿ ಶಾಸಕರು, ಸಂಸದರು ಇದ್ದಾರೆ. ಕಾಂಗ್ರೆಸ್ ದೇಶದಲ್ಲಿ ನೆಲೆ ಕಳೆದುಕೊಳ್ಳುತ್ತಿದೆ. ದೇಶದಲ್ಲಿ ಪ್ರತಿ ಚುನಾವಣೆಯಲ್ಲೂ ಬದಲಾವಣೆ ಆಗ್ತಿದೆ. ಎರಡನೇ ಬಾರಿ ಗೆಲುವು ಸಾಧಿಸೋದು ಎಲ್ಲರಿಗೂ‌ ಕಷ್ಟವಾಗಿದೆ. ಆದರೆ, ಬಿಜೆಪಿ ಅಭ್ಯರ್ಥಿಗಳು ಎರಡು ಬಾರಿ, ಮೂರು ಬಾರಿ ಗೆಲ್ಲುತ್ತಾರೆ. ಇದು ಬಿಜೆಪಿ ಪಕ್ಷದ ಸಂಘಟನಾ ಶಕ್ತಿಯಾಗಿದೆ. ಅಧಿಕಾರಕ್ಕೆ ಬಂದಾಗ ಯಾರೂ ಕೂಡಾ ಸಂಘಟನೆ ಮರೆಯಲಿಲ್ಲ. ಪಾರ್ಟಿಯ ಒಳಗೂ ಕೂಡ ಅನೇಕ ಸಂಘಟನೆಗಳಿವೆ. ಪಕ್ಷದಲ್ಲಿ ಅನೇಕ ಬದಲಾವಣೆ ಮಾಡಿಕೊಂಡಿದ್ದೇವೆ‌ ಎಂದು ತಿಳಿಸಿದರು.

ಕಾಂಗ್ರೆಸ್ ರೀತಿ ಕುಟುಂಬ ರಾಜಕಾರಣಕ್ಕೆ ನಮ್ಮಲ್ಲಿ ಅವಕಾಶ ಇಲ್ಲ. ರಾಜಕಾರಣದಲ್ಲಿ ಉಳಿಯಬೇಕು ಅಂದ್ರೆ ಅಧಿಕಾರ ಹಂಚಿಕೆ ಆಗಬೇಕು. ಇದು ಕಾಂಗ್ರೆಸ್​ನಲ್ಲಿ ಇಲ್ಲದ ಕಾರಣ ಅನೇಕ ನಾಯಕರು ಬಿಜೆಪಿಗೆ ಬರ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಯುವ ನಾಯಕರು ಅಂದ್ರೆ ಸಿದ್ದರಾಮಯ್ಯನ ಮಗ, ಹ್ಯಾರಿಸ್ ಮಗ ಹೀಗೆ ಮನೆಯೊಳಗಿನ ಮಂದಿಯೇ ಯುವನಾಯಕರಾಗಿದ್ದಾರೆ. ಆದರೆ, ಬಿಜೆಪಿಯಲ್ಲಿ ಸಮಾವೇಶದಿಂದ ಬರುವ ಯುವ ಕಾರ್ಯಕರ್ತರೇ ಯುವನಾಯಕರು. ಪ್ರಜಾಪ್ರಭುತ್ವದಲ್ಲಿ ಹೊಸ ವ್ಯವಸ್ಥೆ ಬರಬೇಕು ಅಂದ್ರೆ ಯುವನಾಯಕತ್ವ ಬೇಕು ಎಂದರು.

ನಾಯಕತ್ವ ಬದಲಾವಣೆಯೇ ಬಿಜೆಪಿಗೆ ಶಕ್ತಿ ಎಂದ ಸಂತೋಷ್​, ಪಂಜಾಬ್, ಗುಜರಾರ್​ನಲ್ಲಿ ಯಶಸ್ವಿ ಪ್ರಯೋಗವಾಗಿದೆ ಎಂದು ತಿಳಿಸಿದರು. ಹಾಲಿ‌ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ಮಾಡಲಾಗಿದೆ. ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣವಾಗಿದೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೆ ಟಿಕೆಟ್ ನೀಡಲಿಲ್ಲ. ಗುಜರಾತ್ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿರುವವರನ್ನು ನಿವೃತ್ತಿ ಮಾಡಿದ್ದೇವೆ. ಹೊಸ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಅಧಿಕಾರಕ್ಕೇರಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂತಹ ಪ್ರಯೋಗಗಳು ನಡೆಯುತ್ತವೆ ಎಂದರು.

ಬಿಜೆಪಿ ಪ್ರಮುಖರ ಸಭೆಯಲ್ಲಿ ಸಂತೋಷ್ ಅವರ ಮಾರ್ಮಿಕ ನುಡಿ ಬಿಜೆಪಿಯ ಹಾಲಿ ಶಾಸಕರು ಮತ್ತು ಸಚಿವರಲ್ಲಿ ಆತಂಕ ಶುರು ಮಾಡಿದೆ. ರಾಜ್ಯಕ್ಕೂ ಅನ್ವಯ ಆಗುತ್ತಾ ನಾಯಕತ್ವ ಬದಲಾವಣೆ ಸೂತ್ರ ಎಂಬ ಪ್ರಶ್ನೆ ಮೂಡಿದ್ದು, ರಾಜ್ಯದ 2023ರ ವಿಧಾನಸಭಾ ಚುನಾವಣೆಗೂ ಇದೇ ರೀತಿ ಮಾಸ್ಟರ್ ಪ್ಲ್ಯಾನ್ ರೂಪಿಸಿದರೆ, ಹಾಲಿ‌ ಶಾಸಕರಿಗೆ ಟಿಕೆಟ್ ಕೈತಪ್ಪುವ ಬಗ್ಗೆ ಸಂತೋಷ್ ಮುನ್ಸೂಚನೆ ನೀಡಿದ್ದಾರೆನ್ನಲಾಗಿದೆ. ಇದೀಗ ಬಿಜೆಪಿ ಹೈಕಮಾಂಡ್​ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net