

ಕೊಡಗು: ಆಸ್ಪತ್ರೆಯಲ್ಲಿ ಕಾಣೆಯಾಗಿದ್ದ ಮೊಬೈಲ್ ಮೂರು ತಿಂಗಳ ಬಳಿಕ ಅದೇ ಆಸ್ಪತ್ರೆಯ ಗೋಡೌನ್‌ನಲ್ಲಿ ಪತ್ತೆಯಾಗಿದ್ದು, ಬಾಲಕಿಯ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ.
ವಿವರಣೆಗೆ ಬರುವುದಾದರೆ, ಮೇ 16ರಂದು ಕೋವಿಡ್ ಆಸ್ಪತ್ರೆಯಲ್ಲಿ ಕುಶಾಲನಗರದ ಪ್ರಭಾ ಎಂಬುವರು ಮೃತಪಟ್ಟಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಮೊಬೈಲ್ ಕಾಣೆಯಾಗಿತ್ತು. ಮೊಬೈಲ್ ಹುಡುಕಿ ಕೊಡುವಂತೆ ಪ್ರಭಾ ಅವರ ಮಗಳು ಹೃತೀಕ್ಷಾ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದಳು.
ಅಮ್ಮನ ಫೋಟೋ ಮತ್ತು ನೆನಪುಗಳು ಮೊಬೈಲ್‌ನಲ್ಲಿದೆ. ದಯವಿಟ್ಟು ನನಗೆ ಮರಳಿಸಿ ಅಂತ ಮನವಿ ಮಾಡಿದ್ದಳು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೊಡಗು ಪೊಲೀಸರು ಅಂದಿನಿಂದ ಮೊಬೈಲ್ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಮೂರು ತಿಂಗಳ ಬಳಿಕ ಮೊಬೈಲ್ ಪತ್ತೆಯಾಗಿದೆ.
ಆಸ್ಪತ್ರೆಯ ಗೋಡೌನ್‌ನಲ್ಲಿ ಪತ್ತೆಯಾಗಿದ್ದು, ಮೊಬೈಲ್ ಹೊರಗಿನ ಕವರ್ ಬದಲಾಗಿದೆ. ಉಳಿದೆಲ್ಲಾ ಡೇಟಾ ಅದರಲ್ಲಿದೆ. ಇಂದು ಸಂಜೆ ಪೊಲೀಸ್ ವರಿಷ್ಠಾಧಿಕಾರಿ ಮೊಬೈಲ್ ಹಸ್ತಾಂತರಿಸುತ್ತಾರೆ ಎಂದು ಬಾಲಕಿಯ ಮಾವ ಸಂತೋಷ್ ಹೇಳಿದ್ದಾರೆ. ಮೊಬೈಲ್ ಮರಳಿ ಸಿಗುತ್ತಿರುವುದಕ್ಕೆ ಹೃತೀಕ್ಷಾ ಖುಷಿ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಪತ್ತೆ ಮಾಡುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. (ದಿಗ್ವಿಜಯ ನ್ಯೂಸ್)