ಮಂಡ್ಯದಲ್ಲಿ ನಿಖಿಲ್​​ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ: ಹೊಸ ಬಾಂಬ್​ ಸಿಡಿಸಿದ ಸಚಿವ ನಾರಾಯಣ ಗೌಡ

1249721
Published on

ಮಂಡ್ಯ: ಮಂಡ್ಯದ ಲೋಕಸಭಾ ಚುನಾವಣೆ ವೇಳೆ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ ಎನ್ನುವ ಮೂಲಕ ಸಚಿವ ಕೆ.ಸಿ.ನಾರಾಯಣ ಗೌಡ ಹೊಸ ಬಾಂಬ್​ ಸಿಡಿಸಿದ್ದಾರೆ.

ಕೆ.ಆರ್.ಪೇಟೆಯ ಸಿಂಧಘಟ್ಟದಲ್ಲಿ ಮಾತನಾಡಿದ ಅವರು ನಿಖಿಲ್ ಕುಮಾರಸ್ವಾಮಿ ಬಗ್ಗೆ ನನಗೆ ಗೌರವ ಇದೆ. ಅವರು ಸುಮ್ಮನೆ ಮಾತನಾಡೋದು ತಪ್ಪು. ನಿಖಿಲ್ ಓರ್ವ ಚಿಕ್ಕ ರಾಜಕಾರಣಿ. ಅವರು ಮಾಜಿ ಸಿಎಂ ಕುಮಾರಸ್ವಾಮಿ ಸುಪುತ್ರ. ಏನೇ ಮಾತನಾಡಿದರೂ ಪ್ರತಿಯೊಂದು ಮಾಹಿತಿ ಪಡೆದು ಮಾತನಾಡಬೇಕು ಎಂದು ಹೇಳಿದರು.

ಒಂದೂವರೆ ವರ್ಷ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಅವರ ದೊಡ್ಡಪ್ಪ ಲೋಕೋಪಯೋಗಿ ಇಲಾಖೆಯ ಸಚಿವರು ಆಗಿದ್ದರು ಮತ್ತು ಅವರ ದೊಡ್ಡಪ್ಪನೇ ಎನರ್ಜಿ ಮಿನಿಸ್ಟರ್ ಆಗಿದ್ರು. ಸಾವಿರಾರು ಸಬ್ ಸ್ಟೇಷನ್ ಕೊಟ್ಟೆವು ಎಂದು ಹೇಳ್ತಿದ್ದಾರೆ. ಆದರೆ, ಕೆ.ಆರ್.ಪೇಟೆಗೆ ಒಂದೇ ಒಂದು ಕೊಟ್ಟಿದ್ದಾರಾ? ಒಂದೇ ಒಂದು ತೋರಲಿ ಎನರ್ಜಿ ಮಿನಿಸ್ಟರ್ ಆಗಿ ಎಂದು ಹೆಸರೇಳದೆ ಸವಾಲು ಹಾಕಿದರು.

ಚನ್ನರಾಯಪಟ್ಟಣ ತಾಲ್ಲೂಕು-ಹಾಸನ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಹಾಕೊಂಡಿದ್ದಾರೆ. ನಮ್ಮ ತಾಲ್ಲೂಕಿಗೆ ಎಷ್ಟು ಕೊಟ್ಟಿದ್ದಾರೆ ಅಂತಾ ಅವರ ದೊಡ್ಡಪ್ಪನ್ನನ್ನೇ ನಿಖಿಲ್​ ಕೇಳಲಿ ಮೊದಲು. ಇಲ್ಲ ಮಾಹಿತಿ ಹಕ್ಕಿನಲ್ಲಿ ಕೇಳಲಿ. ಅವರಿಗೆ ವಿಷಯ ಗೊತ್ತಿಲ್ಲ ಪಾಪ. ಅವರ ದೊಡ್ಡಪ್ಪ ಬಂದ ಅನುದಾನವನ್ನೆಲ್ಲ ಹಾಸನಕ್ಕೆ ಹಾಕೊಂಡು ಮಂಡ್ಯನ ಖಾಲಿ ಬಿಟ್ಟರು. ನಿಖಿಲ್ ಸೋಲಬೇಕಾದ್ರೆ ಕೆಲಸಗಳು ಕಾರಣ. ಇಷ್ಟು ಸಾವಿರ ಕೋಟಿ ಕೊಡ್ತೀವಿ ಅಂತಾ ಕುಮಾರಸ್ವಾಮಿ ಖಾಲಿ ಪೇಪರ್​ನಲ್ಲಿ ಹೇಳ್ಕೊಂಡು ಬಂದರು. ಆದರೆ, ರೇವಣ್ಣ ಅವರು ಲೆಟರ್ ಹೆಡ್​ನಲ್ಲಿ ಹಣ ಹೊಡ್ಕೊಂಡು ಹೋಗಿ ಅವರ ಜಿಲ್ಲೆ ಅಭಿವೃದ್ಧಿ ಮಾಡ್ಕೊಂಡ್ರು. ಅಲ್ಲಿ ಅವರ ಮಗನ ಗೆಲ್ಲಿಸಿಕೊಂಡ್ರು, ಮಂಡ್ಯದಲ್ಲಿ ನಿಖಿಲ್​ನ ಸೋಲಿಸಿದರು. ಅದಕ್ಕಿಂತ ಪಾಠ ಬೇಕಾ ನಮ್ಮ ನಿಖಿಲ್ ಕುಮಾರಣ್ಣಂಗೆ. ನಿಖಿಲ್ ಸ್ವಲ್ಪ ತಿಳಿದುಕೊಂಡು ಮಾತನಾಡಲಿ ಎಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net