

ಚೆನ್ನೈ: ‘ಲೇಡಿ ಸೂಪರ್ಸ್ಟಾರ್’ ಬಿರುದಾಂಕಿತ ನಯನತಾರಾ ಮತ್ತು ಜನಪ್ರಿಯ ನಿರ್ದೇಶಕ ವಿಘ್ನೇಶ್ ಶಿವನ್ ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಸದ್ಯದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕಳೆದ 2 ವರ್ಷಗಳಿಂದ ಬರುತ್ತಲೇ ಇದೆ. ಆದರೆ, ಅದೇಕೋ ಅವರಿಬ್ಬರೂ ಮದುವೆ ಆಗುವ ಘಳಿಗೆ ಇನ್ನೂ ಬಂದಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿರುವಾಗಲೇ ಅಭಿಮಾನಿಗಳಿಗೆ ಅಚ್ಚರಿಯ ಸಂಗತಿಯೊಂದು ಇದೀಗ ಎದುರಾಗಿದೆ.
ಕೆಲವೊಂದು ವರದಿಗಳ ಪ್ರಕಾರ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇತ್ತೀಚೆಗಷ್ಟೇ ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.
ತಾರಾಜೋಡಿ ಇತ್ತೀಚೆಗಷ್ಟೇ ಚೆನ್ನೈನಲ್ಲಿರುವ ಶ್ರೀ ಕಾಳಿಕಾಂಬಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಯನಾತಾರಾ ಹಣೆ ಮತ್ತು ಹಣೆ ಮೇಲ್ಭಾಗದಲ್ಲಿ ಕುಂಕುಮ ಇಟ್ಟುಕೊಂಡು ಜನರ ಎದುರು ಪ್ರತ್ಯಕ್ಷರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯರು ಹಣೆಯ ಮೇಲ್ಭಾಗದಲ್ಲಿ ಕುಂಕುಮ ಇಡುವುದು ಹಿಂದು ಸಂಪ್ರದಾಯದ ಪ್ರಕಾರ ಮದುವೆಯಾಗಿರುವ ಸೂಚಕವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನಯನತಾರಾ ಅವರನ್ನು ನೋಡಿದವರು ಖಂಡಿತ ಅವರು ಮದುವೆಯಾಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಇದು ಎಷ್ಟು ಸತ್ಯವೋ ಎಂಬುದನ್ನು ತಾರಾಜೋಡಿಯೇ ಖಚಿತಪಡಿಸಬೇಕಿದೆ.
‘ನಾನುಮ್ ರೌಡಿ ದಾನ್’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ವಿಘ್ನೇಶ್ ಹಾಗೂ ನಯನತಾರಾ ನಡುವೆ ಪ್ರೀತಿ ಟಿಸಿಲೊಡೆದಿದ್ದು, ಅಂದಿನಿಂದ ಇಬ್ಬರೂ ಜತೆಯಾಗಿದ್ದಾರೆ. (ಏಜೆನ್ಸೀಸ್)