ಗುತ್ತಿಗೆದಾರ ಸಂತೋಷ್ ಮೃತದೇಹ ಹುಟ್ಟೂರು ತಲುಪುತ್ತಿದ್ದಂತೆ​ ಪೊಲೀಸರು ಮತ್ತು ಕುಟುಂಬಸ್ಥರ ಮಧ್ಯೆ ವಾಗ್ವಾದ

Santhosh Death Case
Published on

ಬೆಳಗಾವಿ: ಸಚಿವ ಕೆ.ಎಸ್​. ಈಶ್ವರಪ್ಪ ಮೇಲೆ 40% ಕಮಿಷನ್​ ಆರೋಪ ಮಾಡಿ ಆತ್ಮಹತ್ಯೆ ಶರಣಾಗಿರುವ ಗುತ್ತಿಗೆದಾರ ಸಂತೋಷ ಪಾಟೀಲ್ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಅವರ ಪಾರ್ಥಿವ ಶರೀರ ಬೆಳಗಾವಿ ಗಡಿ ತಲುಪಿದೆ.

ಎಸ್ಕಾರ್ಟ್​ ಮುಖಾಂತರ ಪಾರ್ಥಿವ ಶರೀರವನ್ನು ಬೆಳಗಾವಿ ಜಿಲ್ಲಾ ಮತ್ತು ನಗರ ಪೊಲೀಸರು ಸ್ವೀಕರಿಸಿದ್ದಾರೆ. ಆದರೆ, ಸಂತೋಷ್​ ಮೃತದೇಹ ಹುಟ್ಟೂರಿಗೆ ಹೋಗುತ್ತಿದ್ದಂತೆ ಮೃತ ಸಂತೋಷ ಸಹೋದರ ಬಸನಗೌಡ ಪಾಟೀಲ್​ ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿದಿದ್ದಾರೆ.

ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಕಮೀಷನರ್ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಶವ ತೆಗೆದುಕೊಂಡ ಹೋಗಲು ಬಸನಗೌಡ ಪಾಟೀಲ ಮುಂದಾದರು. ಕಮೀಷನರ್ ಕಚೇರಿಗೆ ಹೋಗುವಾಗ ಮಾರ್ಗ ಮಧ್ಯದಲ್ಲೆ ಪೊಲೀಸರು ತಡೆದರು. ಈ ವೇಳೆ ಬಸನಗೌಡ ಪಾಟೀಲ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಆರೋಪಿಗಳನ್ನ ಬಂಧಿಸುವಂತೆ ಪಟ್ಟು ಹಿಡಿದ ಬಸನಗೌಡ ಪಾಟೀಲ, ಬೇಕಾದ್ರೆ ನಿಮ್ಮ ಮೇಲಾಧಿಕಾರಿಗಳಿಗೆ ಮಾತನಾಡಿ ಎಂದರು. ಈ ವೇಳೆ ಮೇಲಾಧಿಕಾರಿಗಳ ಜತೆಗೆ ಡಿಸಿಪಿ ರವೀಂದ್ರ ಗಡಾದೆ ಮಾತನಾಡಿದರು. ಆರೋಪಿಗಳನ್ನ ಬಂಧಿಸುವ ಭರವಸೆ ನೀಡಿದ ಹಿನ್ನೆಲೆ ಕುಟುಂಬಸ್ಥರು ಪಟ್ಟು ಸಡಿಲಿಸಿದರು.

ಸದ್ಯ ಸಂತೋಷ್​ ಮೃತದೇಹವನ್ನು ಹುಟ್ಟೂರು ಕಡೆ ತೆಗೆದುಕೊಂಡು ಹೋಗಲಾಗಿದೆ. ಕೆಲಕಾಲ ಗೊಂದಲ ವಾತಾವರಣ ಮೂಡಿ ಆತಂಕ ಸೃಷ್ಟಿಯಾಗಿತ್ತು. ಈಗ ವಾತಾವರಣ ತಿಳಿಯಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net