More

    ಆಧಾರರಹಿತ ಆರೋಪ, ತೇಜೋವಧೆಗೆ ನಾವು ಹೆದರಲ್ಲ; ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ

    ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನಲ್ಲಿ ರಾಜಕೀಯ ಬೆರೆಸಿ, ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ರಾಜ್ಯ ಸರ್ಕಾರದ ತೇಜೋವಧೆ ಮಾಡುವ ಪ್ರಯತ್ನವನ್ನು ಕಾಣದ ಕೈಗಳು ಮಾಡುತ್ತಿವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇಲ್ಲಿ ದಾಳವಾಗಿ ಬಳಕೆಯಾಗಿದ್ದಾರೆ. ಕಾಂಗ್ರೆಸ್​ನವರ ಟೊಳ್ಳು ಬೆದರಿಕೆಗೆ ಯಾವುದೇ ಸಚಿವರು ಅಂಜುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿ, ಚುನಾವಣೆ ಸಮಯದಲ್ಲಿ ಅಧಿಕಾರಕ್ಕೆ ಬರುವ ತಿರುಕನ ಕನಸನ್ನು ಕಾಂಗ್ರೆಸ್ ಕಾಣುತ್ತಿದೆ. ಈ ರೀತಿ ಆರೋಪಗಳನ್ನು ಮಾಡಿದರೆ ಕಾನೂನು ಹೋರಾಟ ನಡೆಸಲಾಗುವುದು. ಗುತ್ತಿಗೆದಾರರು ಆಧಾರರಹಿತವಾಗಿಯೇ ಎಲ್ಲ ಆರೋಪಗಳನ್ನು ಮಾಡಿದ್ದಾರೆ. ಇವರೆಲ್ಲರೂ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

    ಗುತ್ತಿಗೆದಾರ ಮೃತರಾಗಿರುವುದಕ್ಕೆ ದುಃಖವಿದೆ. ಆದರೆ ಈ ಸಾವು ಏಕೆ ಸಂಭವಿಸಿದೆ ಎಂಬುದು ತನಿಖೆ ಆಗದೆಯೇ ಸಚಿವರ ರಾಜೀನಾಮೆ ಕೇಳುವುದು ಸರಿಯಲ್ಲ. ಈ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರ ಕೂಡ ಬೇಕಿಲ್ಲ. ಕಾಂಗ್ರೆಸ್​ನವರು ಎಷ್ಟು ಸತ್ಯಹರಿಶ್ಚಂದ್ರರು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್​ನವರು ಯಾವ ಇಲಾಖೆಯಲ್ಲಿ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಅಂಕಿ ಅಂಶಗಳನ್ನು ನಾವು ಕೂಡ ಕೊಡಬಹುದು ಎಂದು ಹೇಳಿದರು.

    ಓರ್ವ ವ್ಯಕ್ತಿ ಬರೆದ ಅನಾಮಧೇಯ ಪತ್ರ ಅಥವಾ ಆಧಾರ ರಹಿತ ದೂರಿಗೆ ಮಾನ್ಯತೆ ನೀಡಲು ಸಾಧ್ಯವಿಲ್ಲ. ದಾಖಲೆಗಳೇ ಇಲ್ಲದೆ ಒಬ್ಬರನ್ನು ಗೇಲಿ ಮಾಡುವುದು ಅಥವಾ ಆರೋಪ ಮಾಡುವುದು ಸರಿಯಲ್ಲ. ನಮ್ಮ ಸರ್ಕಾರ ಬಹಳ ಪಾರದರ್ಶಕವಾಗಿ ನಡೆದುಕೊಳ್ಳುತ್ತಿದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದರು.

    ಪ್ರಧಾನಿ ನರೇಂದ್ರ ಮೋದಿ ಪಾರದರ್ಶಕತೆ, ಭ್ರಷ್ಟಾಚಾರ ರಹಿತ ಸರ್ಕಾರವನ್ನು ನೀಡಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿ ಹೇಗೆ ಕೆಲಸ ಮಾಡಬೇಕೆಂದು ಅವರು ತೋರಿಸಿಕೊಟ್ಟಿದ್ದಾರೆ. ಭ್ರಷ್ಟಾಚಾರ ಇಲ್ಲ ಎಂದು ಕೂಡ ನಾನು ಹೇಳುತ್ತಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಭ್ರಷ್ಟಾಚಾರ ಹುಟ್ಟಿರುವುದಲ್ಲ. ಇದರ ನಿಮೂಲನೆಗೆ ಎಲ್ಲ ಪಕ್ಷಗಳು ಸೇರಿ ಚರ್ಚೆ ಮಾಡಬೇಕಿದೆ. ಭ್ರಷ್ಟಾಚಾರವನ್ನು ನಿಯಂತ್ರಿಸುವುದು ಹಾಗೂ ನಿಮೂಲನೆ ಮಾಡುವುದೇ ಈಗಿನ ಸವಾಲು ಎಂದರು.

    ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿ ಸಚಿವರು ಮಾಡಿದ ಭ್ರಷ್ಟಾಚಾರದ ವಿರುದ್ಧ ತನಿಖೆ ಮಾಡಿಸಬೇಕಿದೆ. ಈ ಘಟನೆಯಿಂದ ರಾಜ್ಯ ಹಾಗೂ ಸರ್ಕಾರದ ಗೌರವ ಹಾಳಾಗಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋರಲಾಗುವುದು.

    | ಡಾ.ಕೆ.ಸುಧಾಕರ್ ಆರೋಗ್ಯ ಸಚಿವ

    ತನಿಖಾ ವರದಿ ಬರಲಿ: ಕಾಂಗ್ರೆಸ್​ನವರು ಏನು ಮಾಡುತ್ತಾರೆ ಎಂಬುದು ಈಗ ಮುಖ್ಯವಲ್ಲ, ತನಿಖೆ ನಂತರ ಸತ್ಯ ತಿಳಿದುಬರಲಿದೆ ಹಾಗೂ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಈಗಾಗಲೆ ಹೇಳಿದ್ದಾರೆ. ಹಿಂದೆ ನಡೆದ ಡಿವೈಎಸ್​ಪಿ ಗಣಪತಿ ಪ್ರಕರಣವೇ ಬೇರೆ, ಈಗಿನ ವಿಚಾರವೇ ಬೇರೆ. ವಾಟ್ಸ್​ಆಪ್​ನಲ್ಲಿ ಬಂದ ಸಂದೇಶ ಅವರಿಂದಲೇ ಬಂದಿದೆಯೇ ಎಂಬುದು ಯಾರಿಗೂ ಗೊತ್ತಿಲ್ಲ. ತನಿಖೆ ನಡೆಯುತ್ತಿರುವುದರಿಂದ ಕಾದು ನೋಡಬೇಕಿದೆ ಎಂದು ಸುಧಾಕರ್ ಹೇಳಿದರು. ಸಾರ್ವಜನಿಕ ಬದುಕಿನಲ್ಲಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಇದರಲ್ಲಿ ಸಿಲುಕಿಸುವ ಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ತನಿಖಾ ವರದಿ ಬಂದ ಬಳಿಕ ಪಕ್ಷದ ಮಟ್ಟದಲ್ಲಿ ರ್ಚಚಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

    ಮಾನನಷ್ಟ ಮೊಕದ್ದಮೆ: ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಆದ್ದರಿಂದ ಅವರು ಪುರಾವೆ ಇಟ್ಟುಕೊಂಡು ಸರ್ಕಾರದ ವಿರುದ್ಧ ಆರೋಪ ಮಾಡಬೇಕಾಗುತ್ತದೆ. ಆಧಾರ ರಹಿತವಾಗಿ ಅವರು ಆರೋಪ ಮಾಡಿದ್ದು, ಅವರ ವಿರುದ್ಧ ಕ್ರಮ ವಹಿಸಬೇಕು ಹಾಗೂ ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ ಎಂದು ಸುಧಾಕರ್ ಹೇಳಿದರು. ಕೆಂಪಣ್ಣ ವಿರುದ್ಧ ವೈಯಕ್ತಿಕವಾಗಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಇಂತಹವರನ್ನು ಮುಂದೆ ಇಟ್ಟುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದ್ದು, ಅವರೆಲ್ಲರಿಗೂ ನಾಚಿಕೆಯಾಗಬೇಕು. ಎಲ್ಲ ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಗುತ್ತಿಗೆದಾರರು ಹೇಳಿದ್ದಾರೆ. ಇದು ಕಾಂಗ್ರೆಸ್​ನವರಿಗೂ ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು. ಸರ್ಕಾರ ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ, ಗಂಭೀರವಾಗಿ ತನಿಖೆ ಮಾಡಲಿದೆ. ಇಲ್ಲಿ ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಆದರೆ ಯಾರೋ ಆರೋಪ ಮಾಡುವುದನ್ನು ಪರಿಗಣಿಸಲಾಗುವುದಿಲ್ಲ. ಈ ರೀತಿ ಮಾಡಿದರೆ ಇದೇ ಪರಂಪರೆ ಹೆಚ್ಚುತ್ತದೆ. ಬಡ ಜನರನ್ನು ಎತ್ತಿ ಕಟ್ಟಿ ಸಚಿವರ ವಿರುದ್ಧ ಮಾತನಾಡಲು ಕುಮ್ಮಕ್ಕು ನೀಡಲಾಗುತ್ತಿದೆ. ಆಮಿಷ ತೋರಿಸಿ ಅಮಾಯಕರ ಜೀವ ಕಳೆದರೆ ವಿಪಕ್ಷದ ವಿರುದ್ಧವೂ ತನಿಖೆ ಮಾಡಬೇಕಾಗುತ್ತದೆ ಎಂದರು.

    ಎಸ್ಟೋನಿಯಾ ಜತೆ ಒಡಂಬಡಿಕೆ

    ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಮೂಲಕ ಸುಧಾರಣೆ ತರುವ ಪ್ರಯತ್ನಕ್ಕೆ ಆರೋಗ್ಯ ಇಲಾಖೆ, ಎಸ್ಟೋನಿಯಾ ದೇಶದ ಜೊತೆ ಹೊಸ ಒಡಂಬಡಿಕೆಯನ್ನು ಮಾಡಿಕೊಂಡಿದೆ ಒಡಂಬಡಿಕೆ ಬಳಿಕ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ತಂತ್ರಜ್ಞಾನದ ಮೂಲಕ ಆರೋಗ್ಯ ವಲಯದ ಸುಧಾರಣೆ ಮಾಡಲು ಇದು ಅನುಕೂಲವಾಗಲಿದೆ ಎಂದು ಹೇಳಿದರು. ಎಸ್ಟೋನಿಯಾದಲ್ಲಿನ ಭಾರತದ ರಾಯಭಾರಿ ಕತ್ರಿನ್ ಕಿವ್ ನೇತೃತ್ವದ ಉನ್ನತ ನಿಯೋಗ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದೆ. ಅದು ಚಿಕ್ಕ ದೇಶವಾದರೂ ಅತಿಹೆಚ್ಚು ನವೋದ್ಯಮಗಳನ್ನು ಹೊಂದಿದ್ದು, ತಂತ್ರಜ್ಞಾನಕ್ಕೆ ಹೆಸರಾಗಿದೆ. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸಿದೆ. ಹೀಗಾಗಿ ನಿಯೋಗದ ಭೇಟಿ ರಾಜ್ಯಕ್ಕೆ ಲಾಭವಾಗಲಿದೆ ಎಂದು ಹೇಳಿದರು.

    ಎಸ್ಟೋನಿಯಾದ ಎಲ್ಲ ಪ್ರಜೆಗಳು ಹೆಲ್ತ್ ರಿಜಿಸ್ಟ್ರಿ ಮಾಡಿಕೊಂಡಿದ್ದಾರೆ. ಆ ದೇಶದಲ್ಲಿ ಟೆಲಿ ಮೆಡಿಸಿನ್ ವ್ಯವಸ್ಥೆ ಇದೆ. 400 ವರ್ಷಗಳ ಹಳೆಯ ವಿಶ್ವವಿದ್ಯಾಲಯ ಕೂಡ ಇದೆ. ಇಂತಹ ದೇಶದ ಜತೆ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಎಕ್ಸ್​ಚೇಂಜ್ ಪ್ರೋಗ್ರಾಂ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಇದರಿಂದ ಆ ದೇಶದ ಆರೋಗ್ಯ ವ್ಯವಸ್ಥೆ ಬಗ್ಗೆ ಪರಿಚಯ ಸಿಗುವುದರ ಜತೆಗೆ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಬಗ್ಗೆ ಅವರಿಗೂ ತಿಳಿವಳಿಕೆ ಸಿಗಲಿದೆ ಎಂದು ಹೇಳಿದರು.

    ಎಸ್ಟೋನಿಯಾದಲ್ಲಿ ಜೆನೊಮಿಕ್ ಲ್ಯಾಬ್ ಇದೆ. ವ್ಯಕ್ತಿಯ ಡಿಎನ್​ಎ ಮೂಲಕ ಯಾವ ವ್ಯಕ್ತಿಗೆ ಕ್ಯಾನ್ಸರ್, ರ್ಪಾನ್ಸನ್, ಸಾಂಕ್ರಾಮಿಕ ರೋಗಗಳು ಸೇರಿ ಯಾವ ಕಾಯಿಲೆ ಬರಬಹುದು ಅನ್ನುವುದನ್ನು ಸಂಶೋಧನೆ ಮಾಡಲಾಗುತ್ತದೆ. ಈ ಮೂಲಕ ಕಾಯಿಲೆಯನ್ನು ಬೇಗನೆ ಪತ್ತೆಹಚ್ಚಿ ಅದಕ್ಕೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಳ್ಳಬಹುದು ಅನ್ನುವ ಬಗ್ಗೆ ಮಾತುಕತೆ ನಡೆದಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts