ಮಕ್ಕಳಲ್ಲಿ ವಿಷ ಬೀಜ ಬಿತ್ತನೆ ಮಾಡಲಾಗುತ್ತಿದೆ ಇದು ದೇಶಕ್ಕೆ ಮಾರಕ: ಸಚಿವ ಮುನಿರತ್ನ

Muniratna
Published on

ಕೋಲಾರ: ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಕೊಡಬೇಕೇ ಹೊರತು ಮಕ್ಕಳಲ್ಲಿ ವಿಷ ಬೀಜ ಬಿತ್ತನೆ ಕೆಲಸ ಮಾಡಬಾರದು ಎಂದು ತೋಟಗಾರಿಕೆ ಸಚಿವ ಹಾಗೂ ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಅವರು ಹೇಳಿದರು.

ರಾಜ್ಯದ ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್​-ಕೇಸರಿ ಶಾಲು ಸಂಘರ್ಷ ಕುರಿತು ಮಾತನಾಡಿದ ಮುನಿರತ್ನ, ಇಂತಹ ವಿಚಾರಕ್ಕೆ ಬೆಂಬಲ ಕೊಟ್ಟರೆ ತಾರತಮ್ಯ ಮಾಡಿದಂತೆ. ಎಲ್ಲರೂ ಸಹ ಸಮವಸ್ತ್ರವನ್ನ ಪಾಲನೆ ಮಾಡಬೇಕು. ಇದು ಹೀಗೆ ಮುಂದುವರಿದರೆ ಒಳ್ಳೆಯ ಬೆಳವಣಿಗೆ ಅಲ್ಲ. ಇದು ಒಳ್ಳೆಯ ಸಂಸ್ಕೃತಿ ಮತ್ತು ಪದ್ದತಿಯೂ ಅಲ್ಲ. ಮಕ್ಕಳ ಮೇಲೆ ಇದು ಕೆಟ್ಟ ಪರಿಣಾಮ ಬೀರಲಿದೆ ಎಂದರು.

ಮಕ್ಕಳಿಗೆ ತಿಳುವಳಿಕೆ ನೀಡಬೇಕು ಹೊರತು ಇದನ್ನು ಯಾರು ಸಹ ಪ್ರೋತ್ಸಾಹ ಮಾಡಬಾರದು. ರೋಗಿಗಳಿಗೂ ಸಹ ಆಸ್ಪತ್ರೆಯಲ್ಲಿ ಒಂದೇ ತರಹದ ಯೂನಿಫಾರ್ಮ್ ನೀಡಲಾಗುತ್ತಿದೆ. ಪೋಷಕರು ಸಹ ಇದಕ್ಕೆ ಸಹಕಾರ ನೀಡಬೇಕು. ಮಕ್ಕಳಲ್ಲಿ ವಿಷ ಬೀಜ ಬಿತ್ತನೆ ಮಾಡಲಾಗುತ್ತಿದೆ. ರಾಜಕೀಯ ಮತ್ತು ರಾಜಕಾರಣ ಜನ ಸೇವೆಗೆ ಇರಬೇಕು. ಅದು ಬಿಟ್ಟು ಇಂತಹ ವಿಚಾರಗಳಲ್ಲಿ ರಾಜಕಾರಣ ಮಾಡಬಾರದು ಎಂದರು.

ಇಂತಹ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಳ್ಳುವವರು ಪಾಪಿಗಳು. ಈ ಬೇಧಬಾವ ಮಾಡಬಾರದು. ಇದು ದೇಶಕ್ಕೆ ಮಾರಕ. ಇದು ಹೀಗೆ ಮುಂದುವರೆದ್ರೆ ದೇಶಕ್ಕೆ ದೊಡ್ಡ ಮಾರಕವಾಗಲಿದೆ. ಇದನ್ನು ಬುದ್ಧಿ ಜೀವಿಗಳು ಅಲೋಚನೆ ಮಾಡಬೇಕು. ಮಕ್ಕಳ ಮನಸ್ಸಲ್ಲಿ ಇಂತಹ ವಿಷ ಬಿತ್ತಬೇಡಿ ಎಂದು ಎರಡು ಕೈ ಮುಗಿದು ಮುನಿರತ್ನ ಕೇಳಿಕೊಂಡರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ದೆಹಲಿ ಪ್ರವಾಸ ಕುರಿತು ಮಾತನಾಡಿ, ಸಿಎಂ ಬೆಂಗಳೂರಿಗೆ ಬಂದಾಗ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ತಿಳಿಯಲಿದೆ. ಬಜೆಟ್ ಸಭೆಯಲ್ಲಿ ಭಾಗಿಯಾಗಿ ಜಿಲ್ಲೆಯ ಅವಶ್ಯಕತೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಈ‌ ಬಾರಿ ಬಜೆಟ್​ನಲ್ಲಿ ಜಿಲ್ಲೆಗೆ ಆದ್ಯತೆ ಸಿಗಲಿದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net