

ಕಲಬುರಗಿ: ಇಸ್ಪಿಟ್ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಓಡಿ ಹೋಗುವಾಗ ಕುಸಿದು ಬಿದ್ದ ಯುವಕನೊಬ್ಬ ಸಾವಿಗೀಡಾಗಿರುವ ಘಟನೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ನಡೆದಿದೆ.
ಸಿದ್ದಪ್ಪ ಕೊಂಡಾ (20) ಮೃತ ಯುವಕ. ಮಂಗಳವಾರ (ಆ.30) ತಡರಾತ್ರಿ ಲಾಡ್ಲಾಪುರ ಗ್ರಾಮದ ಹಾಜಿ ಸರ್ವರ್ ದರ್ಗಾದಲ್ಲಿ 10 ರಿಂದ 15 ಜನರ ತಂಡ ಇಸ್ಪಿಟ್ ಆಡುತ್ತಿದ್ದಾಗ ಪೊಲೀಸರು ದಿಢೀರ್ ದಾಳಿ ಮಾಡಿದರು. ಈ ವೇಳೆ ಗಾಬರಿಗೊಂಡ ತಂಡ ಪೊಲೀಸರಿಗೆ ಹೆದರಿ ಚೆಲ್ಲಾಪಿಲ್ಲಿಯಾಗಿ ಓಡುವಾಗ ಸಿದ್ದಪ್ಪ ಕೊಂಡ ಕುಸಿದುಬಿದ್ದು ಮೃತಪಟ್ಟಿದ್ದಾನೆ.
ಗ್ರಾಮಸ್ಥರ ಪ್ರತಿಭಟನೆ
ಸಿದ್ದಪ್ಪಾ ಕೊಂಡ ಸಾವಗೀಡಾದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸುತ್ತಿದ್ದಾರೆ.
ಘಟನೆ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ದಿಗ್ವಿಜಯ ನ್ಯೂಸ್)