ಗೃಹ ಇಲಾಖೆಯಲ್ಲಿ ನೌಕರಿ ಆಮಿಷ: 55 ಜನರಿಂದ 1.62 ಕೋಟಿ ವಸೂಲಿ ಮಾಡಿ ವಂಚಿಸಿದವರ ಬಂಧನ..!

Accused
Published on

ಬೆಂಗಳೂರು: ಗೃಹ ಇಲಾಖೆಯಲ್ಲಿ ಸಹಾಯಕರ ಹುದ್ದೆ ಕೊಡಿಸುವುದಾಗಿ 55 ಜನರಿಂದ 1.62 ಕೋಟಿ ರೂ. ವಸೂಲಿ ಮಾಡಿ ವಂಚಿಸಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಶ್ರೀಲೇಖಾ ಮತ್ತು ಸಂಪತ್‌ಕುಮಾರ್ ಬಂಧಿತ ಆರೋಪಿಗಳು. ಇನ್ನೊರ್ವ ಆರೋಪಿ ರಾಧ ಉಮೇಶ್​ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ನಿವಾಸಿ ಕೆ.ಜಿ. ಮಂಜುನಾಥ್ ಎಂಬುವರು ದೂರು ನೀಡಿದ್ದರು. ಇದರ ಅನ್ವಯ ಶ್ರೀಲೇಖಾ, ರಾಧ ಉಮೇಶ್ ಮತ್ತು ಸಂಪತ್‌ಕುಮಾರ್ ಎಂಬುವರ ವಿರುದ್ಧ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

2019ರ ಮಾರ್ಚ್‌ನಲ್ಲಿ ರಾಧ ಉಮೇಶ್, ಕೆಪಿಸಿಸಿ ಕಾರ್ಮಿಕ ವಿಭಾಗ ಉಪಾಧ್ಯಕ್ಷೆ ಎಂದು ಪರಿಚಯ ಮಾಡಿಕೊಂಡರು. ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳು ಪರಿಚಯವಿದ್ದು, ದಿನಗೂಲಿ ನೌಕರರ ಏಜೆನ್ಸಿ ಕೊಡಿಸುವುದಾಗಿ 15 ಲಕ್ಷ ರೂ. ಕೇಳಿದರು. ಅದನ್ನು ನಂಬಿ 4 ಕಂತುಗಳಲ್ಲಿ 15 ಲಕ್ಷ ರೂ. ನೀಡಿದೆ. ಆನಂತರ ಶ್ರೀಲೇಖಾ, ಏಜೆನ್ಸಿ ಬೇಡ. ಗೃಹ ಇಲಾಖೆಯಲ್ಲಿ ಕಿರಿಯ, ಹಿರಿಯ ಮತ್ತು ಅಧೀಕ್ಷರ ಹುದ್ದೆಗೆ ನೇರ ನೇಮಕಾತಿ ನಡೆಯುತ್ತಿದೆ. ಅದರಲ್ಲಿ ಕೆಲಸ ಕೊಡಿಸುವುದಾಗಿ ಮಾತು ಬದಲಾಯಿಸಿದರು. ಶ್ರೇಲೇಖಾ ಮಾತು ನಂಬಿ 55 ಮಂದಿ ಉದ್ಯೋಗ ಆಕಾಂಕ್ಷಿಗಳು ಒಟ್ಟಿಗೆ ಸೇರಿ ಹಂತ ಹಂತವಾಗಿ ಮೂವರು ಆರೋಪಿಗಳಿಗೂ 1.61 ಕೋಟಿ ರೂ. ಕೊಟ್ಟಿದ್ದೆವೆ. ಹಣ ಸ್ವೀಕರಿಸಿದ ಆರೋಪಿಗಳು ನೇಮಕಾತಿ ಆದೇಶ ಪತ್ರವನ್ನು ನೀಡಿದರು. ಸೆ.24ರಂದು ವಿಧಾನಸೌಧ ಆರ್ಥಿಕ ಇಲಾಖೆಗೆ ಹೋಗಿ ನೇಮಕಾತಿ ಆದೇಶ ಪ್ರಮಾಣ ಪತ್ರವನ್ನು ನೀಡಿದಾಗ ನಕಲಿ ಎಂಬುದು ಗೊತ್ತಾಗಿದೆ. ಅಲ್ಲದೆ, ಇಂತಹ ಹುದ್ದೆಗಳಿಗೆ ನೇಮಕಾತಿಯೇ ನಡೆದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಇದಾದ ಬಳಿಕ ಆರೋಪಿಗಳನ್ನು ಪ್ರಶ್ನಿಸಿದಾಗ ಸಬೂಬು ಹೇಳಿ ಮೋಸ ಮಾಡಿದ್ದಾರೆ. ಈ ಮೂವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಮಂಜುನಾಥ್ ಎಂಬಾತ ಮನವಿ ಮಾಡಿದ್ದರು. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಓರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ವಿಧಾನಸೌಧವೇ ಇವರ ಅಡ್ಡ!

ಉದ್ಯೋಗ ಆಕಾಂಕ್ಷಿಗಳಿಗೆ ವಂಚನೆ ಮಾಡುವ ಸಲುವಾಗಿ ವಿಧಾನಸೌಧವನ್ನೇ ಆರೋಪಿಗಳು ಅಡ್ಡ ಮಾಡಿಕೊಂಡಿದ್ದರು. ಕೆಲ ಯುವಕರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗಿ ಅಧಿಕಾರಿಗಳನ್ನು ತೋರಿಸಿ ನಕಲಿ ನೇಮಕಾತಿ ಆದೇಶ ಪತ್ರ ಕೊಟ್ಟಿದ್ದಾರೆ. ಗೃಹ ಇಲಾಖೆಯಲ್ಲೇ ನೌಕರಿ ಆಮಿಷ ಒಡ್ಡಿದ್ದು, ಪೊಲೀಸರಿಗೆ ಸವಾಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net