ಮಗಳ ಸಾವಿನಿಂದ ಮನನೊಂದು ಅಳಿಯನ ಮನೆ ಮುಂದೆ ಎಡೆಯಿಟ್ಟು ನೇಣಿಗೆ ಶರಣಾದ ತಂದೆ

HSN Father Daughter
Published on

ಹಾಸನ: ಮಗಳ ಸಾವಿನಿಂದ ಮನನೊಂದು ಅಳಿಯನ ಮನೆ ಮುಂದೆ ತಂದೆ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದಿದೆ.

ಎಸ್.ಸೋಮನಹಳ್ಳಿಯ ನಾಗರಾಜ್ (55) ಮೃತ ತಂದೆ. ಮಗಳಿಗೆ ಇಷ್ಟವಾದ ಅಹಾರ ಪದಾರ್ಥಗಳನ್ನು ಮಾಳೆಗೆರೆ ಗ್ರಾಮದ ಅಳಿಯನ ಮನೆ ಬಾಗಿಲಲ್ಲಿ ಎಡೆಯಿಟ್ಟು ಬಾಗಿಲಿನಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವರ್ಷದ ಹಿಂದಷ್ಟೇ ನಾಗರಾಜ್ ಅವರು ತಮ್ಮ ಪುತ್ರಿ ಹೇಮಶ್ರಿಯನ್ನು ಮಾಳೆಗೆರೆಯ ಪ್ರವೀಣ್ ಎಂಬಾತನಿಗೆ ವಿವಾಹ ಮಾಡಿಕೊಟ್ಟಿದ್ದರು. ಆರಂಭದಲ್ಲಿ ಸಂಸಾರ ಚೆನ್ನಾಗಿತ್ತು. ಆದರೆ, ತವರು ಮನೆಯವರು ಮಗಳು ಗರ್ಭಿಣಿಯಾದ ಖುಷಿಯಲ್ಲಿದ್ದರೆ, ಅಳಿಯ ಮಾತ್ರ ಮಗಳ ಗರ್ಭಪಾತಕ್ಕೆ ಯತ್ನಿಸಿದ್ದ ಎಂದು ಮೃತ ನಾಗರಾಜ ಕುಟುಂಬ ಆರೋಪಿಸಿದೆ.

ಮಗಳಿಗೆ ಅತ್ತೆಯ ಮನೆಯವರು ತುಂಬಾ ಕಿರುಕುಳ ನೀಡಿದ್ದರಿಂದ ಆಕೆ ಹೆರಿಗೆ ಸಮಯದಲ್ಲಿ ಸಾವಿಗೀಡಾಗಿದಳು ಎಂದು ಪಾಲಕರು ದೂರಿದ್ದಾರೆ. ಸಾವಿನ ಬಳಿಕ ಮಗಳ ಮರಣಾನಂತರ ಕಾರ್ಯಗಳನ್ನು ಕೂಡ ಸರಿಯಾಗಿ ಮಾಡಿಲ್ಲ ಎಂದು ತಂದೆ ನಾಗರಾಜ್​ ಮನನೊಂದಿದ್ದ. ಅಲ್ಲದೆ, ಅಳಿಯ ಪಡೆದಿದ್ದ ಎರಡು ಲಕ್ಷ ರೂ. ಸಾಲವನ್ನು ಹಿಂದಿರುಗಿಸದೆ, ಸತಾಯಿಸಿಧ್ದರಿಂದ ನಾಗರಾಜ್​ ಬೇಸತ್ತಿದ್ದ.

ಒಂದೆಡೆ ಮಗಳ ಸಾವಿನ ನೋವು, ಮತ್ತೊಂದೆಡೆ ಸಾವಿನ ನಂತರ ಸಂಭವಿಸಿದ ಮನ ನೋಯಿಸುವಂತಹ ಘಟನೆಗಳಿಂದ ಕುಗ್ಗಿ ಹೋಗಿದ್ದ ನಾಗರಾಜ್​, ನಿನ್ನೆ (ಡಿ.8) ಹಾಡು ಹಗಲಿನಲ್ಲೇ ಅಳಿಯನ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಸೆಲ್ಫಿ ವೀಡಿಯೋ ಮಾಡಿ, ಅಳಿಯ, ಆತನ ತಾಯಿ ಹಾಗು ಸಂಬಂಧಿಕರ ಬಗ್ಗೆ ಆರೋಪ ಮಾಡಿದ್ದಾರೆ.

ಅಳಿಯ ಪ್ರವೀಣ್, ಬೀಗರಾದ ಭದ್ರಮ್ಮ ಹಾಗೂ ಅವರ ಸಂಬಂದಿ ವಿರುದ್ಧ ಮಾನಸಿಕ ಕಿರುಕುಳ ಆರೋಪ ಮಾಡಿದ್ದು, ಮೂವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದು ನಾಗರಾಜ್​ ಸೆಲ್ಫಿ ವಿಡಿಯೋದಲ್ಲಿ ಆರೋಪ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬೇಲೂರು ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net