

ಗದಗ: ಅಕ್ರಮ ಮಣ್ಣು ಗಣಿಗಾರಿಕೆಗೆ ಇಬ್ಬರು ಅಪ್ರಾಪ್ತರು ಬಲಿಯಾಗಿರುವ ಘಟನೆ ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ.
ಮಣ್ಣು ತೆಗೆದಿದ್ದ ಬೃಹತ್ ಕ್ವಾರಿಯಲ್ಲಿ ಅಪ್ರಾಪ್ತರು ಈಜಲು ಹೋಗಿದ್ದರು. ಈ ವೇಳೆ ಇಬ್ಬರು ನೀರುಪಾಲಾಗಿದ್ದು, ಕಳೆದ 20 ಗಂಟೆಯಿಂದ ಎಷ್ಟೇ ಹುಡುಕಾಟ ನಡೆಸುತ್ತಿದ್ದರೂ ಇಬ್ಬರ ಶವ ಪತ್ತೆಯಾಗಿಲ್ಲ.
ಮೃತರನ್ನು ಬಸವರಾಜ್ (17) ಮತ್ತು ಈರಣ್ಣ ಎಂದು ಗರುತಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕಾಟಾಚಾರಕ್ಕೆ ಬೋಟ್ ಮೇಲಿಂದಲೇ ಶವ ಹುಡುಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೊಂಡದಲ್ಲಿ ಇಳಿದು ಶವಶೋಧಕ್ಕೆ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕೆಟ್ಟು ಹೋದ ಬೋಟ್ನಿಂದ ಕಾಟಾಚಾರಕ್ಕೆ ಶವ ಹುಡುಕಾಡುತ್ತಿದ್ದಾರೆ ಎಂದು ಅಗ್ನಿಶಾಮಕ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಅಕ್ರಮ ಮಣ್ಣು ಗಣಿಗಾರಿಕೆಗೆ ಕಡಿವಾಣ ಹಾಕದಿದ್ದಕ್ಕೆ ದುರಂತ ಸಂಭವಿಸಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್)