

ಎಚ್.ಡಿ.ಕೋಟೆ: ನಿಜವಾದ ಬಡವರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು ಎಂದು ಪ್ರಾಮಾಣಿಕವಾಗಿ ಕೆಲಸ ಮಾಡಿದವರು ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯಪಟ್ಟರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಬುಧವಾರ ಎಚ್.ಡಿ.ಕೋಟೆ ಮತ್ತು ಸರಗೂರು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ 63ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧ್ರುವನಾರಾಯಣ ಅವರು ಎರಡು ಬಾರಿ ಸಂಸದರಾಗಿ, ಶಾಸಕರಾಗಿ ಸದಾ ಜನರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಿದರು. ತಾಲೂಕಿನಲ್ಲಿ ಅನೇಕ ಯೋಜನೆಗಳ ಮೂಲಕ ಶಾಶ್ವತವಾಗಿ ಉಳಿಯುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಏಕಲವ್ಯ ವಸತಿ ಶಾಲೆ, ಮುರಾರ್ಜಿ ದೇಸಾಯಿ ವಸತಿ ಶಾಲೆ, ಅಂಬೇಡ್ಕರ್ ವಸತಿ ಶಾಲೆ, ಅಂಬೇಡ್ಕರ್ ಭವನ ನವೀಕರಣ, ತಂಬಾಕು ಹರಾಜು ಮಾರುಕಟ್ಟೆ ಸೇರಿದಂತೆ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿ ಕೆಲಸ ಮಾಡಿದರು ಎಂದು ಸ್ಮರಿಸಿದರು.
ಎಲ್ಲ ಪಕ್ಷದವರ ಜತೆ ರಾಜಕೀಯವಾಗಿ ನಿಕಟ ಸಂಬಂಧ ಹೊಂದಿದ್ದ ಅವರು ಪಕ್ಷಾತೀತ ನಾಯಕರಾಗಿದ್ದರು. ತಾಲೂಕಿನ ಜನರ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ನಾನು ಎರಡು ಬಾರಿ ಶಾಸಕನಾಗಲು ಅವರ ಆಶೀರ್ವಾದ ಕಾರಣ. ಇಂದು ಬದುಕಿದ್ದರೆ ನನಗೆ ಶಕ್ತಿಯಾಗಿ ಇರುತ್ತಿದ್ದರು. ಈಗ ನಮ್ಮ ಸರ್ಕಾರವಿದ್ದು ನಿರೀಕ್ಷೆ ಮೀರಿ ತಾಲೂಕನ್ನು ಅಭಿವೃದ್ಧಿಪಡಿಸುತ್ತಿದ್ದರು ಎಂದರು.
ನಯನಕುಮಾರ್ ಆಸ್ಪತ್ರೆ ವತಿಯಿಂದ 250ಕ್ಕೂ ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ಅಂಗವಿಕಲರಿಗೆ ವೀಲ್‌ಚೇರ್, ಮಹಿಳೆಯರಿಗೆ ಹೊಲಿಗೆ ಯಂತ್ರ, ನಿರ್ಗತಿಕರಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.
ಆರ್.ಧ್ರುವನಾರಾಯಣ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಹಿರೇಹಳ್ಳಿ ಸೋಮೇಶ್, ಏಜಾಜ್ ಪಾಷ, ಮನುಗನಹಳ್ಳಿ ಮಾದಪ್ಪ, ಭಾಗ್ಯಲಕ್ಷ್ಮೀ, ಚಿಕ್ಕವೀರನಾಯಕ, ಪಿ.ರವಿ, ಶಿವಪ್ಪ ಕೋಟೆ, ಪರಶಿವಮೂರ್ತಿ, ವನಸಿರಿ ಶಂಕರ, ಆಸೀಫ್ ಇಕ್ಬಾಲ್, ವನಸಿರಿ ಉಮೇಶ್, ಮಣಿ, ಕುಮಾರ, ಮುದ್ದಮಲ್ಲಯ್ಯ, ಜಿವಿಕ ಬಸವರಾಜು, ಅಶೋಕ್, ಪ್ರಕಾಶ್ ಬುದ್ಧ, ಸೌಮ್ಯಾ ಮಂಜುನಾಥ್, ಪ್ರಕಾಶ್, ಮೊತ್ತ ಶಿವಮಲ್ಲು, ಹೈರಿಗೆ ಮಲ್ಲೇಶ, ಮುಳ್ಳೂರು ಮಂಜು, ವೆಂಕಟೇಶ್, ಶಿವರಾಜು ಕಂದೇಗಾಲ, ಸತೀಶ್‌ಗೌಡ, ಗುರುಸ್ವಾಮಿ ಇದ್ದರು.