

ಚಾಮರಾಜನಗರ: ಮುಕ್ತ ಸಮ್ಮತಿಯಿಂದ ಮಾಡಿದ ಲೈಂಗಿಕ ಸಂಪರ್ಕ ಅತ್ಯಾಚಾರವಾಗುವುದಿಲ್ಲ ಎಂದು ಚಾಮರಾಜನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಮದುವೆ ಆಗುತ್ತಾನೆ ಎಂದು ನಂಬಿ ಲೈಂಗಿಕ ಸಂಪರ್ಕಕ್ಕೆ ಸಮ್ಮತಿ ನೀಡಿದರೆ ಅದು ಅತ್ಯಾಚಾರ ಆಗುವುದಿಲ್ಲ. ಒಪ್ಪಿಗೆ ಪಡೆಯುವ ವೇಳೆ ಆರೋಪಿಯು ಅಪರಾಧಿ ಮನಸ್ಥಿತಿ ಹೊಂದಿರುವುದಿಲ್ಲ. ಬೇರೆ ಬೇರೆ ಕಾರಣಗಳಿಗೆ ಮದುವೆಯಾಗದೆ ಇದ್ದರೆ, ಅವರ ಒಪ್ಪಿತ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನ್ ಪುರಿ ತೀರ್ಪು ಪ್ರಕಟಿಸಿದರು.
ಮಹದೇಶ್ವರ ಬೆಟ್ಟ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ತನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಬೆಳೆಸಿದ್ದರು ಎಂದು ಅದೇ ಠಾಣೆಯ ಮಹಿಳಾ ಕಾನ್ಸ್‌ಟೇಬಲ್ ದೂರು ನೀಡಿದ್ದರು. ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಆರೋಪಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಿವಾಹ ಪೂರ್ವದಲ್ಲಿ ಪರಸ್ಪರ ಸಮ್ಮತಿ ಮೇಲೆ ಲೈಂಗಿಕ ಸಂಬಂಧವಿದ್ದು, ನಂತರ ವಿವಾಹ ಆಗದಿದ್ದರೆ ಆ ಲೈಂಗಿಕ ಸಂಬಂಧ ಅತ್ಯಾಚಾರ ಆಗುವುದಿಲ್ಲ. ಈ ಪ್ರಕರಣದಲ್ಲಿ ಅಪರಾಧ ಎಸಗುವ ಉದ್ದೇಶದಿಂದ ಲೈಂಗಿಕ ಸಂಪರ್ಕ ಬೆಳೆಸಿರುವುದಿಲ್ಲ ಎಂದು ಹೇಳುವ ಮೂಲಕ ನ್ಯಾಯಾಲಯ ಅತ್ಯಾಚಾರ ಆರೋಪ ಪ್ರಕರಣವನ್ನು ವಜಾಗೊಳಿಸಿದೆ. (ದಿಗ್ವಿಜಯ ನ್ಯೂಸ್)