

ಚಾಮರಾಜನಗರ: ಟ್ರ್ಯಾಕ್ಟರ್ ಹರಿದು ಗಾಯಗೊಂಡಿದ್ದ 5 ವರ್ಷದ ಬಾಲಕ ಮೃತಪಟ್ಟಿದ್ದಕ್ಕೆ ಮನನೊಂದ ಟ್ರ್ಯಾಕ್ಟರ್ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕು ಸವಕನಪಾಳ್ಯದಲ್ಲಿ ಘಟನೆ.
ಸವಕನಪಾಳ್ಯದ ಬಾಲಕ ಹರ್ಷ (5) ಮತ್ತು ಸುನೀಲ್ (23) ಮೃತ ದುರ್ದೈವಿಗಳು. ಕ್ರಿಕೆಟ್ ಟೂರ್ನಮೆಂಟ್ಗಾಗಿ ಗುರುವಾರ ಮೈದಾನವನ್ನು ಟ್ರ್ಯಾಕ್ಟರ್ ಮೂಲಕ ಸಮತಟ್ಟು ಮಾಡಲಾಗುತ್ತಿತ್ತು. ಈ ವೇಳೆ ಸುನೀಲ್ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ. ಸಮತಟ್ಟು ಮಾಡುವುದನ್ನು ನೋಡುತ್ತಾ ನಿಂತಿದ್ದ ಹರ್ಷನಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆಸು, ಗಂಭೀರವಾಗಿ ಗಾಯಗೊಂಡಿದ್ದ.
ಇದಾದ ತಕ್ಷಣವೇ ಹರ್ಷನನ್ನು ಮಧ್ಯಾಹ್ನ ಗುಂಡ್ಲುಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಹರ್ಷ ಇಹಲೋಕ ತ್ಯಜಿಸಿದ. ಇತ್ತ ಘಟನೆ ನಂತರ ಸುನೀಲ್ ಮೈಸೂರಿಗೆ ಪರಾರಿಯಾಗಿದ್ದ. ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಸುನೀಲ್ ಪಿಎಚ್ಡಿ ಮಾಡುತ್ತಿದ್ದಾನೆ. ಬಾಲಕ ಮೃತಪಟ್ಟ ಸುದ್ದಿ ತಿಳಿದು ಮೈಸೂರಿನ ತನ್ನ ರೂಮಿನಲ್ಲೇ ಸುನೀಲ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಸಂಬಂಧ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಟೂರ್ನಮೆಂಟ್ಗಾಗಿ ಮೈದಾನ ಸಮತಟ್ಟು ಮಾಡಲು ಗ್ರಾಮಸ್ಥರೊಬ್ಬರು ಟ್ರ್ಯಾಕ್ಟರ್ ಪಡೆದು ಸುನೀಲ್ ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ. (ಏಜೆನ್ಸೀಸ್)