ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ: ಕರೊನಾ ಲಸಿಕೆ ಕಡ್ಡಾಯ ಮಾಡುವುದಾಗಿ ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ​

ashwathnarayana
Published on

ಬೆಂಗಳೂರು: ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕರೊನಾ ರೂಪಾಂತರಿ ಒಮಿಕ್ರಾನ್​ ರಾಜ್ಯಕ್ಕೂ ಕಾಲಿಟ್ಟಿದೆ. ಕರ್ನಾಟಕದಲ್ಲಿ ಎರಡು ಕೇಸ್​ ಪತ್ತೆಯಾಗಿದ್ದು, ಇದು ದೇಶದಲ್ಲಿ ಒಮಿಕ್ರಾನ್​ ಪತ್ತೆಯಾದ ಮೊದಲ ಪ್ರಕರಣವಾಗಿದೆ. ಎರಡೂ ಕೇಸ್​ಗಳು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ರಾಜ್ಯದ ಜನತೆಯಲ್ಲಿ ಆತಂಕ ಶುರುವಾಗಿದೆ.

ಒಮಿಕ್ರಾನ್​ ಪತ್ತೆಯಾದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಭಯ ಭೀತರಾಗಬೇಡಿ ಎಂದು ಕರೆ ನೀಡಿದ್ದಾರೆ. ಬಹಳ ಮುಖ್ಯವಾಗಿ ಇಂದು ಕೋವಿಡ್ 19 ಒಮಿಕ್ರಾನ್ ವೈರಸ್ ಸೋಂಕಿನ ಕಾಯಿಲೆ ಇದೆ. ಇದರಿಂದ ಆತಂಕ ಇದೆ. ಆದರೆ, ಭಯಪಟ್ಟಕೊಳ್ಳಬೇಡಿ. ನಿಮ್ಮ ಮೊದಲ ಕೆಲಸ ಲಸಿಕೆ ಪಡೆಯೋದು. ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ಪಡೆಯಿರಿ ಎಂದು ಕರೆ ನೀಡಿದರು.

ಒಂದೂ ಲಸಿಕೆ ಪಡೆಯದವರು ಒಂದಾದರೂ ಪಡೆಯಿರಿ. ಸರ್ಕಾರ ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ. ಮುಂದಿನ ದಿನ ಮಾಲ್, ಥಿಯೇಟರ್ ಬರುವವರಿಗೆ ಲಸಿಕೆ ಕಡ್ಡಾಯ ಮಾಡಲಿದ್ದೇವೆ. ಸದ್ಯ ಸಿನಿಮಾ ಥಿಯೇಟರ್ ನಡೆಸಲು ಅನುಮತಿ ಇದೆ. ಸಿನಿಮಾ, ರೆಸ್ಟೋರೆಂಟ್, ಎಲ್ಲವೂ ನಡೆಯಲಿದೆ. ಆದರೆ, ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು ಎಂದರು.

ಕರೊನಾ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಿ ಎಲ್ಲರ ಜೀವನ, ಜೀವನಾಂಶವನ್ನು ಉಳಿಸುವ ಕೆಲಸ ಮಾಡೋಣ. ಸದ್ಯ ಯಾವುದೂ ಕೂಡ ಬಂದ್ ಆಗೋದಿಲ್ಲ. ಮುಂದಿನ ದಿನಗಳಲ್ಲಿ ಪ್ರಕರಣದ ತೀವ್ರತೆಯನ್ನು ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net