ಭಾರೀ ಮಳೆಗೆ ಧರೆಗುರುಳಿ ಕಾರಿನ ಮೇಲೆ ಬಿದ್ದ ಮರ: ಕರೆ ಮಾಡಿ ತಿಳಿಸಿದ್ರು ಕ್ಯಾರೆ ಎನ್ನದ ಬಿಬಿಎಂಪಿ ಸಿಬ್ಬಂದಿ

BBMP
Published on

ಬೆಂಗಳೂರು: ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಿಲಿಕಾನ್​ ಸಿಟಿಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಚಲಿಸುತ್ತಿದ್ದ ಕಾರಿನ‌ ಮೇಲೆ ಬೃಹತ್​ ಮರ ಬಿದ್ದ ಘಟನೆ ನಾಗರಭಾವಿ-ಬೆಂಗಳೂರು ಯೂನಿವರ್ಸಿಟಿ ರಸ್ತೆಯಲ್ಲಿ ನಡೆದಿದೆ.

ಕಾರಿನ ಬಾನೆಟ್​ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಬ್ಯಾಟರಾಯನಪುರ ಸಂಚಾರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರೇ ಕರೆ ಮಾಡಿದರೂ ಘಟನಾ ಸ್ಥಳಕ್ಕೆ ಬರಲು ಬಿಬಿಎಂಪಿ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ.

ಸುಮಾರು ನಾಲ್ಕು ಗಂಟೆಯ ಬಳಿಕ ಬಿಬಿಎಂಪಿ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದರು. ಘಟನೆ ನಡೆದಿದ್ದು ರಾತ್ರಿ 9.30ರ ಸುಮಾರಿಗೆ. ಕೂಡಲೇ ಘಟನಾ ಸ್ಥಳಕ್ಕೆ ಭೇಟಿ‌ ನೀಡಿದ ಟ್ರಾಫಿಕ್​ ಸಿಬ್ಬಂದಿ ಬಿಬಿಎಂಪಿಗೆ ಮಾಹಿತಿ ನೀಡಿದರು. ಆದ್ರೆ ನಾಲ್ಕು ಗಂಟೆ ಘಟನಾ ಸ್ಥಳಕ್ಕೆ ಬಾರದೆ ಬಿಬಿಎಂಪಿ ಸಿಬ್ಬಂದಿ ಮತ್ತು ಅಧಿಕಾರಿಗಳು ಬೇಜವಬ್ದಾರಿ ಮೆರೆದಿದ್ದಾರೆ.

ನಾಲ್ಕು ಗಂಟೆ ಬಳಿಕ ಘಟನಾ ಸ್ಥಳಕ್ಕೆ ಬಂದ ಸಿಬ್ಬಂದಿ, ಮರ ಕತ್ತರಿಸುವ ಕೆಲಸ ಮಾಡಿದ್ದಾರೆ. ರಸ್ತೆಯನ್ನು ತೆರವುಗೊಳಿಸಿದ್ದಾರೆ. ಭಾರೀ ಮಳೆ ಬಿದ್ದರೆ ರಾಜಧಾನಿ ರಸ್ತೆಗಳಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವಾಗ? ಯಾವ ಮರ ಬೀಳುತ್ತದೆ ಎಂಬುದು ಗೊತ್ತಾಗುವುದಿಲ್ಲ. ನಗರದಲ್ಲಿ ಬೀಳುವ ಹಂತದಲ್ಲಿರುವ ಮರಗಳ ಬಗ್ಗೆ ಬಿಬಿಎಂಪಿ ಗಮನ ವಹಿಸಬೇಕೆಂಬುದು ಜನರ ಆಶಯವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net