More

    ಬ್ಯಾಂಕಿಂಗ್ ಸೇವೆಗೆ ಮೊಬೈಲ್ ಕೀಲಿಕೈ; ಆನ್​ಲೈನ್ ಕಳ್ಳರಿದ್ದಾರೆ ಎಚ್ಚರಿಕೆ..

    ಡಿಜಿಟಲ್ ಸೇವೆ ಎಲ್ಲ ರಂಗದಲ್ಲೂ ಆವರಿಸುತ್ತಿದೆ. ನೋಟು ಅಮಾನ್ಯೀಕರಣ ಬಳಿಕ ನೆಟ್​ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಕ್ರೆಡಿಟ್, ಡೆಬಿಟ್ ಕಾರ್ಡ್, ಇ-ವ್ಯಾಲೆಟ್​ಗಳ ಮೊರೆ ಹೋಗಿರುವ ಜನರು ತರಕಾರಿಯಿಂದ ಆಭರಣ ಖರೀದಿವರೆಗೂ ಕ್ಯಾಬ್​ನಿಂದ ವಿಮಾನ ಟಿಕೆಟ್ ಬುಕಿಂಗ್​ವರೆಗೂ ಕ್ಯಾಷ್​ಲೆಸ್ ವ್ಯವಹಾರ ಮೈಗೂಡಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಸೈಬರ್ ಖದೀಮರ ಉಪಟಳ ಹೆಚ್ಚಾಗಿದ್ದು, ದೇಶದಲ್ಲಿ ವಾರ್ಷಿಕವಾಗಿ ಅಂದಾಜು 4000 ಕೋಟಿ ರೂ. ಗೂ ಅಧಿಕ ಹಣ ಸೈಬರ್ ಕಳ್ಳರ ಪಾಲಾಗುತ್ತಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ 7ರಿಂದ 10 ಸಾವಿರ ಸೈಬರ್ ವಂಚನೆ ಪ್ರಕರಣಗಳು ಠಾಣೆ ಮೆಟ್ಟಿಲೇರುತ್ತಿವೆ. ಸೈಬರ್ ಕಳ್ಳರು ಹೇಗೆಲ್ಲ ಕೃತ್ಯವೆಸಗುತ್ತಾರೆ? ಸೈಬರ್ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

    | ಗೋವಿಂದರಾಜು ಚಿನ್ನಕುರ್ಚಿ

    ಬ್ಯಾಂಕ್ ಅಧಿಕಾರಿ, ಸಿಮ್ ಕಾರ್ಡ್ ಕಂಪನಿ ಸೋಗಿನಲ್ಲಿ ಗ್ರಾಹಕರಿಗೆ ಆಧಾರ್, ಪ್ಯಾನ್​ಕಾರ್ಡ್ ಲಿಂಕ್ ಮಾಡುವ ಸೋಗಿನಲ್ಲಿ ಕರೆ ಮಾಡಿ ಬ್ಯಾಂಕ್ ಖಾತೆ ವಿವರ ಪಡೆದು ಮೋಸ ಮಾಡುತ್ತಿದ್ದಾರೆ. ಬಹುಮಾನ ಬಂದಿರುವುದಾಗಿ ಜನರಿಗೆ ಕರೆ, ಎಸ್​ಎಂಎಸ್, ಇ-ಮೇಲ್ ಮಾಡಿ ಅಮಾಯಕರನ್ನು ಬುಟ್ಟಿಗೆ ಬೀಳಿಸಿಕೊಂಡು ಜಿಎಸ್​ಟಿ, ಆದಾಯ ತೆರಿಗೆ, ಕಸ್ಟಮ್ ತೆರಿಗೆ ಎಂದೆಲ್ಲ ಹೇಳಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿಸಿಕೊಂಡು ವಂಚಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ. ಸೈಬರ್ ಪೊಲೀಸರ ಜಾಗೃತಿಯಿಂದಾಗಿ ಬ್ಯಾಂಕ್ ಖಾತೆ ವಿವರ, ಕ್ರೆಡಿಟ್-ಡೆಬಿಟ್ ಕಾರ್ಡ್, ಸಿವಿವಿ, ಪಿನ್ ನಂಬರ್ ಕೊಡಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ವರಸೆ ಬದಲಿಸಿರುವ ಸೈಬರ್ ಖದೀಮರು ಇದೀಗ ಮೊಬೈಲ್ ನಂಬರ್ ಮತ್ತು ಒನ್​ಟೈಮ್ ಪಾಸ್​ವರ್ಡ್ ಪಡೆದು ಬ್ಯಾಂಕ್ ಖಾತೆಗೆ ಕನ್ನ ಹಾಕುವ ಪ್ರಕರಣಗಳು ಹೆಚ್ಚಾಗುತ್ತಿವೆ. ವ್ಯಾಲೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆ ಹೆಚ್ಚಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ (ಕೆವೈಸಿ) ಲಿಂಕ್ ಮಾಡಿರುವ ಪರಿಣಾಮ ಮೊಬೈಲ್ ನಂಬರ್​ಗೆ ಬ್ಯಾಂಕ್ ವಿವರ ಲಿಂಕ್ ಆಗಿದೆ. ವ್ಯಾಲೆಟ್ ಅಥವಾ ಆನ್​ಲೈನ್ ಬ್ಯಾಂಕಿಂಗ್ ಸೇವೆ ಕೇವಲ ಮೊಬೈಲ್ ಮೂಲಕವೇ ನಡೆಸಬಹುದು. ಆನ್​ಲೈನ್​ನಲಿ ್ಲ ವ್ಯಾಪಾರ ನಡೆಸುವ ವಾಣಿಜ್ಯ ಕಂಪನಿಗಳು ವಸ್ತುಗಳ ಮಾರಾಟದ ಬಳಿಕ ಗ್ರಾಹಕರ ಮೊಬೈಲ್​ಗೆ ಲಿಂಕ್ ಕಳುಹಿಸಿ ವ್ಯಾಲೆಟ್​ನಿಂದ ಹಣ ಕಡಿತ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕೇವಲ ಮೊಬೈಲ್ ನಂಬರ್ ಮತ್ತು ಅದಕ್ಕೆ ಬರುವ ಒಟಿಪಿ ಇದ್ದರೆ ಸಾಕು, ಹಣ ಎತ್ತಬಹುದು. ಇದನ್ನು ತಿಳಿದಿರುವ ಸೈಬರ್ ಕಳ್ಳರು, ಗೂಗಲ್​ನಲ್ಲಿ ಹೆಲ್ಪ್​ಲೈನ್ ಜಾಗದಲ್ಲಿ ತಮ್ಮ ಮೊಬೈಲ್ ಸಂಖ್ಯೆ ಅಪ್​ಡೇಟ್ ಮಾಡಿರುತ್ತಾರೆ. ಆ ನಂಬರ್​ಗೆ ಕರೆ ಮಾಡಿದಾಗ ಸಹಾಯ ಮಾಡುವ ಸೋಗಿನಲ್ಲಿ ಗ್ರಾಹಕರ ಮೊಬೈಲ್​ಗೆ ಲಿಂಕ್ ಕಳುಹಿಸಿ ಅದರ ಮೇಲೆ ಒತ್ತುವಂತೆ ಸೂಚನೆ ಕೊಡುತ್ತಾರೆ. ಅದರಂತೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಹಾಕಿದರೆ ಅದಕ್ಕೆ ಬರುವ ಒಟಿಪಿ ಆಟೋ ಜನರೇಟ್ ಆಗಿ ಬ್ಯಾಂಕ್​ಗೆ ಸಂಪರ್ಕವಾಗಿ ಹಣ ಸೈಬರ್ ಕಳ್ಳರ ಪಾಲಾಗಲಿದೆ. ಅದಕ್ಕಾಗಿ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಸಹ ಮುಖ್ಯ ಎಂದು ಸೈಬರ್ ತಜ್ಞರ ಅಭಿಪ್ರಾಯವಾಗಿದೆ.

    ಸೈಬರ್ ದಾಳಿಗೊಳಗಾದರೆ ಏನು ಮಾಡಬೇಕು?

    ಬೆಂಗಳೂರು ನಗರ ಪೊಲೀಸ್ ವಿಭಾಗದ ಕಮಾಂಡ್ ಸೆಂಟರ್​ನಲ್ಲಿ ‘ಸೈಬರ್ ಕ್ರೖೆಂ ಘಟನೆ ವರದಿ’ (ಸಿಐಆರ್) ಎಂಬ ವಿಶೇಷ ತಂಡ ರಚನೆ ಮಾಡಲಾಗಿದೆ. ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಾರೆ. ಸೈಬರ್ ಕಳ್ಳರಿಂದ ಯಾಮಾರಿ ವಂಚನೆಗೆ ಒಳಗಾದರೆ ಅಂತವರು ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ 112 ಅಥವಾ ನಮ್ಮ100ಗೆ ಕರೆ ಮಾಡಿ. ಪೊಲೀಸರು ಕೇಳುವ ಪ್ರಾಥಮಿಕ ಮಾಹಿತಿ ನೀಡಿದರೆ ಸಂಬಂಧಪಟ್ಟ ಬ್ಯಾಂಕ್​ಗೆ ಇ-ಮೇಲ್​ನಲ್ಲಿ ವಿವರ ಕಳುಹಿಸುತ್ತಾರೆ. ದೂರುದಾರನ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಆಗಿರುವ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸಿ ಸೈಬರ್ ಕಳ್ಳರು ಹಣ ಡ್ರಾ ಮಾಡುವುದನ್ನು ತಡೆಯುತ್ತಾರೆ. ಆನಂತರ ಗ್ರಾಹಕರಿಂದ ದೂರು, ಸೂಕ್ತ ದಾಖಲೆ ಪಡೆದು ಎಫ್​ಐಆರ್ ಮಾಡಿ ಕಾನೂನು ಪ್ರಕಾರ ಬ್ಯಾಂಕಿಗೆ ಮಾಹಿತಿ ರವಾನಿಸಿ ಹಣ ವಾಪಸ್ ಪಡೆದು ಕೋರ್ಟ್ ಮೂಲಕ ದೂರುದಾರನಿಗೆ ನೀಡಲಾಗುತ್ತದೆ.

    ಡಿಪಿಗೆ ಫೋಟೋ ಬಳಸಿ ಮೋಸ: ಮೊಬೈಲ್ ಡಿಪಿಗೆ ಪರಿಚಯಸ್ಥರ ಫೋಟೋ ಬಳಸಿಕೊಂಡು ವಾಟ್ಸ್​ಆಪ್​ನಲ್ಲಿ ಚಾಟ್ ಮಾಡಿ ಹಣ ಪಡೆದು ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇತ್ತೀಚೆಗೆ ಐಎಎಸ್, ಐಪಿಎಸ್, ನ್ಯಾಯಾಧೀಶರು ಇನ್ನಿತರ ಹಿರಿಯ ಅಧಿಕಾರಿಗಳ ಫೋಟೋಗಳನ್ನು ಡಿಪಿಗೆ ಬಳಸಿ ಅವರ ಕೈ ಕೆಳಗಿನ ಅಧಿಕಾರಿಗೆ ವಾಟ್ಸ್​ಆಪ್​ನಲ್ಲಿ ಗಿಫ್ಟ್ ವೋಚರ್ ಖರೀದಿಗೆ ಸೂಚಿಸುತ್ತಾರೆ.

    ಹೆಲ್ಪ್​ಲೈನ್ ಸೋಗಿನಲ್ಲಿ ವಂಚನೆ: ಗೂಗಲ್​ನಲ್ಲಿ ಹೆಲ್ಪ್​ಲೈನ್ ಜಾಗದಲ್ಲಿ ಸೈಬರ್ ಕಳ್ಳರು ತಮ್ಮ ನಂಬರ್ ಅಪ್​ಲೋಡ್ ಮಾಡುತ್ತಾರೆ. ಜನರು ಗೂಗಲ್​ನಲ್ಲಿ ಮೊಬೈಲ್ ನಂಬರ್ ಸರ್ಚ್ ಮಾಡಿ ಕರೆ ಮಾಡಿದಾಗ ಸೈಬರ್ ಕಳ್ಳರು ಸಹಾಯ ಮಾಡುವ ಸೋಗಿನಲ್ಲಿ ವಂಚನೆ ಮಾಡುತ್ತಾರೆ. ಆನ್​ಲೈನ್ ಶಾಪಿಂಗ್​ನಲ್ಲಿ ಹಣ ಹಿಂದಿರುಗಿಸಲು ಸಹಾಯ, ಬ್ಯಾಂಕ್​ಗೆ ಕೆವೈಸಿ ಮಾಡುವುದಾಗಿ ನಂಬಿಸಿ ಖಾತೆಗೆ ವಂಚನೆ ಮಾಡುತ್ತಿದ್ದಾರೆ.

    ಬ್ಯಾಂಕಿಂಗ್ ಸೇವೆಗೆ ಮೊಬೈಲ್ ಕೀಲಿಕೈ; ಆನ್​ಲೈನ್ ಕಳ್ಳರಿದ್ದಾರೆ ಎಚ್ಚರಿಕೆ..

    ಕೆಲವೊಂದು ಟಿಪ್ಸ್ ಇಲ್ಲಿವೆ

    • ಅನಾಮಿಕ ಮೊಬೈಲ್ ಕರೆಗೆ, ಇ-ಮೇಲ್​ನಲ್ಲಿ ಬ್ಯಾಂಕಿನ ವಿವರ ಹಂಚಿಕೊಳ್ಳಬೇಡಿ
    • ಇ-ಮೇಲ್​ನಲ್ಲಿ ಬ್ಯಾಂಕ್ ಖಾತೆ, ಮೊಬೈಲ್ ನಂಬರ್, ಪಾಸ್​ವರ್ಡ್ ರವಾನಿಸಬೇಡಿ
    • ಕಾಲಕಾಲಕ್ಕೆ ಬ್ಯಾಂಕ್ ಖಾತೆಯ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸಿ
    • ಸೈಬರ್ ಕೆಫೆ, ಅಪರಿಚಿತರ ಕಂಪ್ಯೂಟರ್ ನೆಟ್​ಬ್ಯಾಂಕಿಂಗ್ ಬಳಕೆಗೆ ಒಳ್ಳೆಯದಲ್ಲ
    • ಮೊಬೈಲ್ ಬ್ಯಾಂಕಿಂಗ್ ಸಿಮ್ಾರ್ಡ್ ಸ್ಥಗಿತವಾದ ಕೂಡಲೆ ಸಿಮ್ ಕಂಪನಿಗೆ ದೂರು ಕೊಡಿ
    • 3 ತಿಂಗಳಿಗೊಮ್ಮೆ ಪಾಸ್​ವರ್ಡ್ ಬದಲಾವಣೆ ಒಳಿತು
    • ಇಂಟರ್​ನೆಟ್ ಬಳಸುವಾಗ ಸುರಕ್ಷಿತ ವೆಬ್​ಸೈಟ್(ಜಜಠಿಟಠ) ಎಂಬುದನ್ನು ಪರೀಕ್ಷಿಸಿ
    • ಪ್ರತಿ ಬ್ಯಾಂಕ್ ವ್ಯವಹಾರ ಮೊಬೈಲ್​ಗೆ ಎಸ್​ಎಂಎಸ್ ಬರುವಂತೆ ಮಾಡಿಕೊಳ್ಳಬೇಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts