ಕಬೋರ್ಡ್‌ಗೆ ನೂಕಿದ ಪರಿಣಾಮ ಪತ್ನಿ ಸಾವು: ಮರುಕ್ಷಣವೇ ಗಂಡನೂ ದುರಂತ ಅಂತ್ಯ

Wife Husband
Published on

ಬೆಂಗಳೂರು: ಬ್ಯಾಡರಹಳ್ಳಿಯ ಕುಂಚಿತಿಗರಪಾಳ್ಯದಲ್ಲಿ ಕುಡಿದು ಬಂದು ಪತ್ನಿಯನ್ನು ಕೊಲೆ ಮಾಡಿದ ಪತಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾತನೂರು ಕುಂಚಿತಿಗರಪಾಳ್ಯದ ನಿವಾಸಿ ರೋಜಾ (32) ಹತ್ಯೆಯಾದವಳು. ಈಕೆಯ ಪತಿ ಮಂಜುನಾಥ್ (32) ಆತ್ಮಹತ್ಯೆಗೆ ಶರಣಾದವ.

ಮಂಜುನಾಥ್ ಮಳವಳ್ಳಿ ಮೂಲದ ರೋಜಾಳನ್ನು 4 ವರ್ಷದ ಹಿಂದೆ ವಿವಾಹವಾಗಿದ್ದ. ಆದರೆ, ದಂಪತಿಗೆ ಮಕ್ಕಳಿರಲಿಲ್ಲ. ಪತಿ ಮಂಜುನಾಥ್ ಕುಡಿದು ಬಂದು ಪ್ರತಿನಿತ್ಯ ಪತ್ನಿಯ ಮೇಲೆ ಹಲ್ಲೆ ನಡೆಸಿ ಜಗಳ ಮಾಡುತ್ತಿದ್ದ. ಭಾನುವಾರ ಮಧ್ಯಾಹ್ನ ಮಂಜುನಾಥ್ ಎಂದಿನಂತೆ ಕುಡಿದು ಬಂದು ಪತ್ನಿ ಜತೆ ಜಗಳ ಮಾಡಿದ್ದ. ಈ ಬಗ್ಗೆ ಪತ್ನಿ ಪ್ರಶ್ನಿಸಿದಾಗ ಆಕೆಗೆ ಹಲ್ಲೆ ನಡೆಸಿ ಕಬೋರ್ಡ್‌ಗೆ ತಳ್ಳಿದ್ದ. ಪರಿಣಾಮ ರೋಜಾ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಳು.

ಪತ್ನಿ ಮೃತಪಟ್ಟಿರುವುದನ್ನು ಕಂಡು ಆತಂಕಗೊಂಡ ಮಂಜುನಾಥ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಂಪತಿ ಜಗಳ ನಡೆಯುತ್ತಿದ್ದ ಬಗ್ಗೆ ನೆರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಗಿಲು ಒಡೆದು ನೋಡಿದಾಗ ಮಂಜುನಾಥ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ರೋಜಾ ಮೃತದೇಹ ಮನೆಯ ಹಾಲ್‌ನಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ಕಬೋರ್ಡ್‌ನಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ. ದುರ್ಘಟನೆಗೆ ನಿಖರ ಕಾರಣವೇನು? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net