

ಬೆಂಗಳೂರು: ಯಾರೇ ಆಗಲಿ ಮೊಬೈಲ್, ಲ್ಯಾಪ್ಟಾಪ್ಗಳನ್ನು ರಿಪೇರಿಗೆ ಕೊಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ವೈಯಕ್ತಿಕ ಮಾಹಿತಿಗಳು, ಫೋಟೋ ಅಥವಾ ವಿಡಿಯೋಗಳಿದ್ದರೆ ಅವುಗಳ ಬಗ್ಗೆ ಗಮನಹರಿಸಬೇಕು. ಸ್ವಲ್ಪ ಯಾಮಾರಿದರೆ ಏನಾಗಲಿದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಲ್ಯಾಪ್‌ಟಾಪ್ ರಿಪೇರಿ ಮಾಡಲು ಮನೆಗೆ ಬಂದಿದ್ದಾಗ ಮಹಿಳೆಯ ಖಾಸಗಿ ಪೋಟೋ ಪಡೆದು ಬ್ಲಾಕ್ಮೇಲ್ ಮಾಡಿದ ಆರೋಪದ ಮೇಲೆ ಬಾಗಲಗುಂಟೆ ಪೊಲೀಸರು ಖತರ್ನಾಕ್ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಪ್ರವೀಣ್ ರಾವ್ ಎಂದು ಗುರುತಿಸಲಾಗಿದೆ. ಈತ ದಾಸರಹಳ್ಳಿಯ ಮಹೇಶ್ವರಿ ನಗರದ ನಿವಾಸಿ. ಲ್ಯಾಪ್‌ಟಾಪ್ ರಿಪೇರಿ ಮಾಡಿಕೊಡಲು ಬಂದವನು ಅದರಲ್ಲಿದ್ದ ಮಹಿಳೆಯ ಖಾಸಗಿ ಫೋಟೋಗಳನ್ನು ಪಡೆದುಕೊಂಡು ಬ್ಲಾಕ್ಮೇಲ್ ಮಾಡಲು ಆರಂಭಿಸಿದ್ದ. ಅಲ್ಲದೆ, ಖಾಸಗಿ ಪೋಟೋಗಳನ್ನು ಮಹಿಳೆಯ ಪತಿಯ ಮೊಬೈಲ್ಗೆ ಶೇರ್ ಮಾಡಿದ್ದ.
ಠಾಣೆಗೆ ದೂರು ಕೊಟ್ಟರೆ ಜೀವ ತಗೆಯುವುದಾಗಿ ಬೆದರಿಕೆ ಹಾಕಿದ್ದ. ಕೊನೆಗೂ ಆತನ ಕಾಟ ತಡೆಯಲಾರದೆ ಮಹಿಳೆ ದೂರು ನೀಡಿದ್ದಳು. ಕಾರ್ಯಾಚರಣೆಗೆ ಇಳಿದ ಬಾಗಲಗುಂಟೆ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)