

ಬೆಂಗಳೂರು: ಪದೇಪದೆ ಭೀಕರ ಅಪಘಾತಗಳು ಸಂಭವಿಸಿ ದುರಂತ ಸಾವುಗಳಾಗುತ್ತಿದ್ದರೂ ನಗರದಲ್ಲಿ ಯುವಜನತೆ ಎಚ್ಚೆತ್ತುಕೊಳ್ಳದೇ ಇರುವುದು ದುರಾದೃಷ್ಟಕರ. ಬೆಂಗಳೂರಿನಲ್ಲಿ ಐಷಾರಾಮಿ ಕಾರು ಮಾಲೀಕರ ಶೋಕಿ ಮುಂದುವರಿದಿದ್ದು, ಕರೊನಾ ನೈಟ್ ಕರ್ಫ್ಯೂ ಬರಿ ನೆಪಕ್ಕೆ ಮಾತ್ರ ಎನ್ನುವಂತಾಗಿದೆ.
ವೇಗವಾಗಿ ಬಂದ ಪೋರ್ಷ್ ಕಾರು ಇಟಿಯೋಸ್ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ರಭಸಕ್ಕೆ ಇಟಿಯೋಸ್ ಕಾರಿನ ಹಿಂಭಾಗ ಪುಡಿ ಪುಡಿ ಆಗಿರುವ ಘಟನೆ ನಗರದ ದೊಮ್ಮಲೂರು ರಸ್ತೆಯಲ್ಲಿ ತಡ ರಾತ್ರಿ ನಡೆದಿದೆ. ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಕಾರು ಚಲಾಯಿಸಿಕೊಂಡು ಬಂದು ಇಟಿಯೋಸ್ ಕಾರಿಗೆ ಪೋರ್ಷ್ ಕಾರು ಸವಾರ ಡಿಕ್ಕಿ ಹೊಡೆದಿದ್ದಾನೆ.
ಪೋರ್ಷ್ ಕಾರು ಚಾಲಕ ಜುವೇರ್ ಎಡವಟ್ಟಿನಿಂದ ಅಪಘಾತ ನಡದೇ ಹೋಗಿದೆ. ಆರ್ಮಿ ಆಸ್ಪತ್ರೆ ಬಳಿ ಘಟನೆ ನಡೆದಿದ್ದು, ಮೊದಲು ಇಟಿಯೋಸ್ ಕಾರಿಗೆ ಗುದ್ದಿ ಆರ್ಮಿ ಆಸ್ಪತ್ರೆಯ ಗೇಟಿಗೆ ಪೋರ್ಷ್ ಕಾರು ಡಿಕ್ಕಿ ಹೊಡೆದಿದೆ. ಮದ್ಯಪಾನ ಮಾಡಿ ನಿರ್ಲಕ್ಷದಿಂದ ವಾಹನ ಚಲಾಯಿಸಿದ್ದೆ ಅಪಘಾತಕ್ಕೆ ಕಾರಣವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ಹಲಸೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ಯಪಾನ ಮಾಡಿ ಕಾರು ಚಲಾಯಿಸಿರುವ ಕುರಿತು ಅನುಮಾನ ಹಿನ್ನಲೆ ಚಾಲಕ ಜುವೇರ್ನನ್ನು ವಶಕ್ಕೆ ಪಡೆದ ಪೊಲೀಸರು ಆತನ ರಕ್ತದ ಮಾದರಿಯನ್ನು ಕಲೆ ಹಾಕಿದ್ದಾರೆ. ಹಲಸೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಲ್ಲರೂ ಜಸ್ಟ್ ಮಿಸ್
ಅಪಘಾತದಲ್ಲಿ ಪೋರ್ಷ್ ಕಾರಿನಲ್ಲಿದ್ದವರು ಸ್ವಲ್ಪದರಲ್ಲೆ ಬಚಾವಾಗಿದ್ದಾರೆ. ಎಲ್ಲಾ ಕಾರಿಗು ಇಂಧನ ಟ್ಯಾಂಕ್ ಹಿಂಭಾಗದಲ್ಲಿದ್ರೆ ಈ ಕಾರಿಗೆ ಮುಂಭಾಗದಲ್ಲಿದೆ. ಇಂಜಿನ್ ಪಕ್ಕದಲ್ಲೇ ಇಂಧನ ಟ್ಯಾಂಕ್ ಇರುವ ಹಿನ್ನಲೆ ಅಪಘಾತವಾದಾಗ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಯಿತ್ತು. ಗುದ್ದಿದ ರಭಸಕ್ಕೆ ಕಾರಿನ ಪೆಟ್ರೋಲ್ ಟ್ಯಾಂಕ್ ಸಹ ಡ್ಯಾಮೇಜ್ ಆಗಿದೆ. ಅಪಘಾತದ ವೇಳೆ ಪೆಟ್ರೋಲ್ ಸೋರಿಕೆಯಾಗಿದ್ರೆ ಕಾರು ಬೆಂಕಿಗಾಹುತಿಯಾಗಬೇಕಿತ್ತು. ಆದರೆ, ಅದೃಷ್ಟವಶಾತ್ ಬಚಾವ್ ಆಗಿದ್ದಾರೆ.
ಗುದ್ದಿದ ರಭಸಕ್ಕೆ ಪೋರ್ಷ್ ಕಾರಿನ ಮುಂಭಾಗದ ಬಂಪರ್, ಇಂಜಿನ್, ಗೇರ್ ಬಾಕ್ಸ್ ಹಾಗೂ ಎರಡು ಚಕ್ರಗಳಿಗೆ ಹಾನಿಯಾಗಿದೆ. ಒಂದೂವರೆ ಕೋಟಿ ಮೌಲ್ಯದ ಪೋರ್ಷ್ ಕಂಪನಿಯ ರೇಸ್ ಕಾರು ಎರಡು ಆಸನಗಳನ್ನ ಮತ್ತು 3995 ಸಿಸಿಯ ಸಾಮರ್ಥ್ಯವನ್ನು ಹೊಂದಿದೆ. (ದಿಗ್ವಿಜಯ ನ್ಯೂಸ್)