

ಬೆಂಗಳೂರು: ಚಲಿಸುತ್ತಿದ್ದ ಬೈಕ್ ಮೇಲೆ ವಿದ್ಯುತ್ ಕಂಬವೊಂದು ಮುರಿದು ಬಿದ್ದು, ಅದೃಷ್ಟವಶಾತ್ ಸ್ವಲ್ಪದರಲ್ಲೇ ಬೈಕ್ ಸವಾರ ಬಚಾವಾದ ಘಟನೆ ಜನ ನಿಬಿಡ ವಿಕ್ಟೋರಿಯಾ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ನಡೆದಿದೆ.
ಶ್ರೀನಗರ ನಿವಾಸಿ ಸೋಮಶೇಖರ್ ಪ್ರಾಣಾಪಾಯದಿಂದ ಪಾರಾದ ಬೈಕ್ ಸವಾರ. ಸೋಮಶೇಖರ್ ಇದೇ 12 ರಂದು ಕೆಲಸ ನಿಮಿತ ಬೈಕ್ನಲ್ಲಿ ತೆರಳುತ್ತಿದ್ದರು. ಮಧ್ಯಾಹ್ನ 1.50ಕ್ಕೆ ಹಳೇ ಸ್ಟ್ರೀಟ್ ಲೈಟ್ ಕಂಬ ಮುರಿದು ಸೋಮಶೇಖರ್ ಬೈಕ್ ಮೇಲೆಯೇ ಬಿದ್ದಿದೆ. ಈ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ದಾಖಲಾಗಿದೆ.
ಕಂಬ ಬಿದ್ದ ರಭಸಕ್ಕೆ ಬೈಕ್ ಜಖಂ ಆಗಿದ್ದು, ಸೋಮಶೇಖರ್ ಕೈಗೆ ಗಾಯವಾಗಿದೆ. ಹಲವು ವರ್ಷಗಳಿಂದ ಪೋಲ್ ಬದಲಾಯಿಸದೇ ಹಾಗೇ ಬಿಟ್ಟಿರುವುದು ಅವಘಡಕ್ಕೆ ಕಾರಣವಾಗಿದ್ದು, ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬೆಸ್ಕಾಂ ನಿರ್ಲಕ್ಷ್ಯಕ್ಕೆ ವಾಹನ ಸವಾರರು ಬಲಿ ಪಡೆಯಲು ವಿದ್ಯುತ್ ಕಂಬಗಳು ರೆಡಿಯಾಗಿವೆ ಎಂದು ಸಾರ್ವಜನಿಕರು ಟೀಕಿಸುತ್ತಿದ್ದಾರೆ.
ಘಟನೆ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಬೆಸ್ಕಾಂ ವಿರುದ್ಧ ಸೋಮಶೇಖರ್ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್)