

ಬೆಂಗಳೂರು: ಇವಳೊಬ್ಬಳು ಐನಾತಿ ಲೇಡಿ ಹಾಗೂ ಖತರ್ನಾಕ್ ನಯವಂಚಕಿ. ತಾನು ಮಾಜಿ ಡಿಸಿಎಂ ಅಣ್ಣನ ಮಗಳು ಅಂತ ನಂಬಿಸುತ್ತಿದ್ದ ಈಕೆಗೆ ಸರ್ಕಾರಿ ನೌಕಕರಿಗೆ ಪ್ರಮೋಷನ್ ಹಾಗೂ ಸರ್ಕಾರಿ ನೌಕರಿ ಬೇಕು ಅನ್ನೋರೆ ಟಾರ್ಗೆಟ್. ಅಲ್ಲದೆ, ತನಗೆ ಯಾರು ಇಲ್ಲ ಅಂತ ಹೇಳಿ ಮನೆಗೆ ಬಂದು ಇಲ್ಲದ ಸಂಬಂಧದ ನೆಪ ಇಟ್ಕೊಂಡು ವಂಚಿಸಿ, ಸಿಕ್ಕಿದ್ದನ್ನು ದೋಚಿ ಪರಾರಿ ಆಗುವುದೇ ಈಕೆಯ ಕೃತ್ಯ. ಇವಳ ಮೋಸದ ಜಾಲಕ್ಕೆ ಸಿಲುಕಿದೋರು ಒಬ್ಬಿಬ್ಬರಲ್ಲ, ಅಷ್ಟಕ್ಕೂ ಈ ನಯವಂಚಕಿ ಆದ್ರು ಯಾರು ಅಂತೀರಾ ಮುಂದೆ ಓದಿ...
ಈ ಫೋಟೋದಲ್ಲಿರುವ ನಯವಂಚಕಿ ಹೆಸರು ಪಲ್ಲವಿ. ತಾನು ಮಾಜಿ ಸಿಎಂ ಜಿ.ಪರಮೇಶ್ವರ್ ಅಣ್ಣನ ಮಗಳು ಅಂತ ನೆಪ ಹೇಳ್ಕೊಂಡು ಸರ್ಕಾರಿ ಕೆಲಸ ಕೊಡಿಸ್ತೀನಿ ಅಂತಾ ನಿಮ್ಮನ್ನೆನಾದ್ರು ಭೇಟಿ ಮಾಡುದ್ರೆ ಹುಷಾರ್. ಈಕೆ ನಯ-ನಾಜೂಕಾಗಿ ಜನರನ್ನ ವಂಚಿಸೋ ನಯವಂಚಕಿ. ಈಕೆ ಮಾಡಿರೋ ಅನ್ಯಾಯ ಒಂದೆರಡಲ್ಲ. ಸಿಕ್ಕಸಿಕ್ಕವನ್ನ ನಂಬಿಸಿ, ಸಿಕ್ಕಿದ್ದನ್ನೆಲ್ಲ ದೋಚಿಕೊಂಡು ಕೊನೆಗೆ ಅವರನ್ನೆ ಬ್ಲಾಕ್ ಮೇಲ್ ಮಾಡಿ ಜೈಲಿಗೆ ಕಳುಹಿಸುವಂತ ಐನಾತಿ ಈಕೆ.
ಬೆಂಗಳೂರು ಉತ್ತರ ತಾಲೂಕು ಹೆಸರಘಟ್ಟ ಸಮೀಪದ ಮತ್ಕೂರು ಗ್ರಾಮದ ನಿವಾಸಿ ವಿಧಾನಸೌಧದ ನೌಕರ ನಾಗರಾಜು ಎಂಬುವರನ್ನ ಪರಿಚಯ ಮಾಡ್ಕೊಂಡು ನಯವಾಗಿ ಅಪ್ಪಾಜಿ ಅಂತೆಲ್ಲಾ ಕರೆದು, ತನಗೆ ಯಾರೂ ಇಲ್ಲ ಅಂತ ನಂಬಿಸಿ, ನಾಗರಾಜು ಮನೆಯಲ್ಲೇ 15 ದಿನ ಕಾಲ ತಂಗಿದ್ದು, ಕೊನೆಗೆ ಆತನ ಮನೆಯ ಬೀರುವಿನಲ್ಲಿದ್ದ 4 ಲಕ್ಷ ಹಣ ಲಪಟಾಯಿಸಿದ್ದಾಳೆ. ಹಣ ವಾಪಸ್ ಕೇಳಿದ್ದಕ್ಕೆ, ಅವರ ಮೇಲೆ ಅಟ್ರಾಸಿಟಿ, ರೇಪ್ ಕೇಸ್ ಸೇರಿದಂತೆ ವಿವಿಧ ಪ್ರಕರಣಗಳನ್ನ ಸೇರಿಸಿ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿ ಜೈಲಿಗೆ ಕಳುಹಿಸಿದ್ದಳು ಎನ್ನಲಾಗಿದೆ.
ಇನ್ನೂ ವಿಧಾನಸೌಧದ ಪಡಸಾಲೆಯ ಅಧಿಕಾರಿಗಳು ಹಾಗೂ ಸಚಿವರ ಕಛೇರಿಗಳಲ್ಲಿ ಚಾಲಾಕಿಯಂತೆ ಓಡಾಡುತ್ತಿದ್ದ ಈಕೆ, ಕೆಲ ಸಿಬ್ಬಂದಿಗಳ ಗಮನ ಸೆಳೆಯುತ್ತಿದ್ದಳು. ಅಲ್ಲಿ ಕೆಲಸ ಕಾರ್ಯಗಳಿಗೆ ಓಡಾಡುವ ಜನ ಸಾಮಾನ್ಯರನ್ನು ಟಾರ್ಗೆಟ್ ಮಾಡುತ್ತಿದ್ದ ಈ ಐನಾತಿ ಲೇಡಿ, ಸರ್ಕಾರಿ ಕೆಲಸ ಕೊಡಿಸುತ್ತೇನೆ, ಲೋನ್ ಕೊಡಿಸುತ್ತೇನೆ, ಟ್ರಾನ್ಸ್‌ಫರ್ ಮಾಡಿಸಿ ಕೊಡ್ತೀನಿ ಅಂತ ನಂಬಿಸುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಅಸಲಿಗೆ ಈಕೆಯ ಘನಂಧಾರಿ ಕೆಲಸಗಳಿಗೆ ಬಳಿಸಿಕೊಳ್ಳುತ್ತಿದ್ದದ್ದು ರಾಜ್ಯದ ಪವರ್ ಹೌಸ್ ವಿಧಾನಸೌಧವನ್ನ. ಈಕೆ ಕೇವಲ ಬೆಂಗಳೂರು ಮಾತ್ರವಲ್ಲ ಮಂಡ್ಯ, ಮೈಸೂರು ಸೇರಿದಂತೆ ಈಕೆಯ ಮೇಲೆ ರಾಜ್ಯದ ವಿವಿಧೆಡೆ ಪ್ರಕರಣಗಳು ದಾಖಲಾಗಿದ್ದು, ಪರ ಪುರುಷರನ್ನ ತನ್ನ ಖೆಡ್ಡಾಗೆ ಬೀಳುಸುತ್ತಿದ್ದ ಈಕೆ ಅವರನ್ನ ಪುಸಲಾಯಿಸಿ ಕೊನೆಗೆ ಅವರ ಮೇಲೂ ಸಹ ಅತ್ಯಾಚಾರ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾಳೆ.
ಸಮಾಜ ಕಲ್ಯಾಣ ಇಲಾಖೆಯಿಂದ ಅತ್ಯಾಚಾರ ಸಂತ್ರಸ್ತೆ ಎಂದು ಹಲವು ಭಾರಿ ಸರ್ಕಾರದಿಂದ ಸಹಾಯಧನ ಸಹ ಪಡೆದುಕೊಂಡಿದ್ದಾಳಂತೆ. ಅಲ್ಲದೆ ಬೆಂ.ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿ ನಿವಾಸಿಯೊಬ್ಬರ ಮಗಳಿಗೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 2 ಲಕ್ಷ ಹಣ ಪಡೆದಿದ್ರೆ, ಹೆಸರಘಟ್ಟ ಮೂಲದವರೊಬ್ಬರಿಗೆ ಕೃಷಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿ 1 ಲಕ್ಷ ಲಪಟಾಸಿದ್ದಾಳೇ ಎನ್ನಲಾಗಿದೆ. ಅಲ್ಲದೆ ಈ ಮುಂಚೆಯೂ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಮನೆಗೆ ಈಕೆಯನ್ನ ಕರೆದೋಯ್ದಾಗ ಸುಳ್ಳು ಹೇಳುತ್ತೀಯಾ ಅಂತಾ ಪರಮೇಶ್ವರ್ ಮನೆಯಲ್ಲಿ ಈಕೆಗೆ ಧರ್ಮದೇಟು ಕೊಟ್ಟು ಜೈಲಿಗಟ್ಟಿದ್ದರಂತೆ, ಇಷ್ಟಾದರೂ ಹಳೇ ಚಾಳಿ ಬಿಡದೆ ಈಕೆ ಮುಂದುವರೆಸಿದ್ದಾಳೆ ಎನ್ನಲಾಗಿದೆ.
ಸದ್ಯ ಘಟನೆ ಸಂಬಂಧಿಸಿದಂತೆ ಆರೋಪಿತಳಾದ ಪಲ್ಲವಿ ಹಾಗೂ ಆಕೆಗೆ ಸಹಕಾರ ನೀಡುತ್ತಿದ್ದ ಅವಳ ಸ್ನೇಹಿತೆ ಇಂದ್ರಾಣಿ ವಿರುದ್ಧ ಸೋಲದೇವನಹಳ್ಳಿ ಸೇರಿದಂತೆ ರಾಜ್ಯದ ಹಲವೆಡೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಈಕೆಯ ವಂಚನೆಗೊಳಗಾದ ಅದೆಷ್ಟೋ ಜನ್ರು ಮರ್ಯಾದೆಗೆ ಅಂಜಿ ಸೈಲೆಂಟ್ ಆಗಿಬಿಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ರು ಸೂಕ್ತ ತನಿಖೆ ನಡೆಸಿ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಬೇಕಿದೆ.