ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲಿಸಿ ಜೈಲಿಗೆ ಅಟ್ಟಲಾಗುವುದು: ಗುಡುಗಿದ ಹೈಕೋರ್ಟ್

high court
Published on

ಬೆಂಗಳೂರು: ನಗರದಲ್ಲಿ ರಸ್ತೆಗುಂಡಿಗಳಿಂದ ಜನ ಸಾಯುತ್ತಿದ್ದಾರೆ. ಆದರೆ, ಎಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಸಾರ್ವಜನಿಕರು ರಸ್ತೆ ಮೇಲೆ ಅನುಭವಿಸುತ್ತಿರುವ ಕಷ್ಟಗಳು ಕಾಣುತ್ತಿಲ್ಲ. ಜನ ಈ ರೀತಿ ಸಾಯಲು ನ್ಯಾಯಾಲಯ ಅವಕಾಶ ಕೊಡುವುದಿಲ್ಲ. ಇಂಥ ಅನಾಹುತಗಳಿಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲಿಸಿ ಕೂಡಲೇ ಜೈಲಿಗೆ ಅಟ್ಟಲಾಗುವುದು ಎಂದು ಹೈಕೋರ್ಟ್ ಗುಡುಗಿದೆ.

ಬೆಂಗಳೂರಿನ ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ 2015ರಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಪೀಠ, ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ಪಾಲಿಕೆ ಇಂಜಿನಿಯರ್‌ಗಳು ಬೇಜವ್ದಾರಿಯಿಂದ ವರ್ತಿಸುತ್ತಿದ್ದು, ಕೋರ್ಟ್ ಎಂದರೆ ಏನೆಂದು ಅವರಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿತು.

ಎಸಿ ಕಚೇರಿಯಲ್ಲಿರುವ ನಿಮಗೆ ಜನರ ಕಷ್ಟ ತಿಳಿಯಲ್ಲ:

ನ್ಯಾಯಾಲಯದ ನಿರ್ದೇಶನದಂತೆ ಖುದ್ದು ವಿಚಾರಣೆಗೆ ಹಾಜರಾಗಿದ್ದ ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಿ.ಎಸ್. ಪ್ರಹ್ಲಾದ್, ರಸ್ತೆಗುಂಡಿ ಮುಚ್ಚುವ ಕಾಮಗಾರಿ ಕುರಿತು ವಿವರಣೆ ನೀಡಿದರು. ಆದರೆ, ಅದನ್ನೊಪ್ಪದ ಪೀಠ, ಸ್ವಯಂಚಾಲಿತ ಗುಂಡಿ ಮುಚ್ಚುವ ಯಂತ್ರವನ್ನು ಹೊಂದಿರುವ ಏಜೆನ್ಸಿಯ ಗುತ್ತಿಗೆಯನ್ನು ಏಕೆ ನವೀಕರಿಸಿಲ್ಲ. ಒಮ್ಮೆ ಹೊಸದಾಗಿ ಟೆಂಡರ್ ಕರೆಯಲಾಗುವುದು ಎಂದು ಹೇಳುತ್ತೀರಿ, ಮತ್ತೊಮ್ಮೆ ಒಂದು ಬಾರಿ ಗುತ್ತಿಗೆ ನವೀಕರಿಸಲಾಗುವುದು ಎಂದು ಹೇಳುತ್ತೀರಿ. ಮುಖ್ಯ ಇಂಜಿನಿಯರ್ ಕೋರ್ಟ್ ಮುಂದೆ ಸ್ಮಾರ್ಟ್ ಆಗಿ ವರ್ತಿಸುತ್ತಿದ್ದಾರೆ. ಕೋರ್ಟ್ ಮುಂದೆ ಏನು ಹೇಳುತ್ತಿದ್ದೀರಿ ಎಂಬ ಬಗ್ಗೆ ಎಚ್ಚರವಿರಲಿ. ಸುಳ್ಳು ಹೇಳಿಕೆ ನೀಡಿದರೆ ಇಲ್ಲಿಂದಲೇ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ. ನ್ಯಾಯಾಲಯದ ದಾರಿ ತಪ್ಪಿಸಲು ಯತ್ನಿಸುತ್ತಿದ್ದೀರಾ ಎಂದು ಆಕ್ರೋಶ ಹೊರಹಾಕಿತಲ್ಲದೆ, ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತುಕೊಳ್ಳುವ ನಿಮಗೆ ಸಾರ್ವಜನಿಕರ ಸಮಸ್ಯೆ ಏನು ಎಂದು ಅರ್ಥವಾಗುವುದಿಲ್ಲ. ನಾವು ಅದನ್ನು ಅರ್ಥ ಮಾಡಿಸುತ್ತೇವೆ ಎಂದು ಹೇಳಿತು.

ನಿಮ್ಮ ನಿರ್ಲಕ್ಷ್ಯಕ್ಕೆ ಜನ ಸಾಯಬೇಕೆ?

ನ್ಯಾಯಾಲಯದ ಆದೇಶಗಳನ್ನು ಪಾಲನೆ ಮಾಡದೆ ನೆಪಗಳನ್ನೇ ಹೇಳುತ್ತಾ ಬಂದಿದ್ದೀರಿ. ರಸ್ತೆಗಳೆಲ್ಲ ಗುಂಡಿಮಯವಾಗಿದೆ. ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ನೀವು ತೋರುತ್ತಿರುವ ನಿರ್ಲಕ್ಷ್ಯಕ್ಕೆ ಜನ ಬಲಿಯಾಗಬೇಕೆ ಎಂದು ಪ್ರಶ್ನಿಸಿದ ಪೀಠ, ಈಗಿಂದೀಗಲೇ ನ್ಯಾಯಾಂಗ ಆದೇಶ ಹೊರಡಿಸುವ ಮೂಲಕ ನಿಮ್ಮನ್ನು ಸೇವೆಯಿಂದ ಅಮಾನತುಪಡಿಸಿ ಜೈಲಿಗೆ ಕಳುಹಿಸುತ್ತೇವೆ. ಇಲ್ಲವಾದರೆ, ಕ್ರಿಮಿನಲ್ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಿ, ಎ್ಐಆರ್ ದಾಖಲಿಸಲು ಹಾಗೂ ಇವರ ಬದಲಿಗೆ ಉತ್ತಮ ಹಾಗೂ ಸಮರ್ಥ ಅಧಿಕಾರಿಗಳನ್ನು ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಲಾಗುವುದು. ಕಠಿಣ ಕ್ರಮ ಕೈಗೊಂಡರೆ ಮಾತ್ರ ನೀವು ಸುಧಾರಿಸುತ್ತೀರಿ ಎಂದು ಕಟುವಾಗಿ ನುಡಿಯಿತು.

ಪ್ರಧಾನ ಅಭಿಯಂತರರ ಹಾಜರಿಗೆ ಸೂಚನೆ:

ಪಾಲಿಕೆ ಪರ ವಕೀಲ ವಿ. ಶ್ರೀನಿಧಿ, ಈ ಕುರಿತು ಹಿರಿಯ ಅಧಿಕಾರಿಗಳ ಜತೆ ತಾವೇ ಖುದ್ದಾಗಿ ಚರ್ಚಿಸಿ ಸಮಸ್ಯೆ ಸರಿಪಡಿಸಲು ಯತ್ನಿಸುವುದಾಗಿ ಭರವಸೆ ನೀಡಿದರು. ಅದನ್ನು ಪರಿಗಣಿಸಿದ ಪೀಠ, ನಿಮ್ಮ ಮಾತಿನ ಮೇಲೆ ಭರವಸೆ ಇಟ್ಟು ಇನ್ನೂ ಒಂದು ವಾರ ಕಾಲಾವಕಾಶ ನೀಡುತ್ತೇವೆ. ಆದರೆ, ಮುಂದಿನ ವಿಚಾರಣೆ ವೇಳೆ ಯಾವುದೇ ಕಾರಣಗಳನ್ನು ನೀಡಬಾರದು. ರಸ್ತೆ ಗುಂಡಿಗಳನ್ನು ಯಾರು, ಹೇಗೆ ಮುಚ್ಚುತ್ತಾರೆ ಎನ್ನುವುದು ನಮಗೆ ಮುಖ್ಯವಲ್ಲ. ರಸ್ತೆಗಳು ಗುಣಮಟ್ಟದಿಂದ ಕೂಡಿರಬೇಕು. ಈ ನಿಟ್ಟಿನಲ್ಲಿ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗುಂಡಿ ಮುಚ್ಚಲು ಯಾವ ತಂತ್ರಜ್ಞಾನ ಅನುಸರಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಜತೆಗೆ, ಮುಂದಿನ ವಿಚಾರಣೆ ವೇಳೆ ಪಾಲಿಕೆಯ ಪ್ರಧಾನ ಅಭಿಯಂತರರು ಖುದ್ದು ಹಾಜರಿರಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಫೆ.15ಕ್ಕೆ ಮುಂದೂಡಿತು.

ವಿವರಣೆ ಕೇಳಿದ ಹೈಕೋರ್ಟ್:

ರಸ್ತೆಗುಂಡಿಗಳನ್ನು ಮುಚ್ಚಲು ಸ್ವಯಂಚಾಲಿತ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿತ್ತು. ಈ ಯಂತ್ರಗಳನ್ನು ಹೊಂದಿದ್ದ ಏಜೆನ್ಸಿಗೆ ನೀಡಿದ್ದ ಗುತ್ತಿಗೆ 2022ರ ಜ.3ರಂದು ಮುಕ್ತಾಯಗೊಂಡಿರುವ ಕಾರಣ ಸದ್ಯ ಆ ಯಂತ್ರಗಳನ್ನು ಬಳಸುತ್ತಿಲ್ಲ ಎಂದು ಪಾಲಿಕೆ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವಿವರಣೆ ನೀಡಬೇಕಿದೆ. ಹಳೆಯ ಗುತ್ತಿಗೆ ನವೀಕರಿಸದಿದ್ದರೆ, ಸ್ವಯಂಚಾಲಿತ ರಸ್ತೆಗುಂಡಿ ಮುಚ್ಚುವ ಯಂತ್ರಗಳ ಬಳಕೆಗೆ ಯಾವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಗುತ್ತಿಗೆ ಮುಗಿಯಲಿದೆ ಎಂಬ ವಿಚಾರ ತಿಳಿದಿದ್ದರೂ, ಮೊದಲೇ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿಲ್ಲವೇಕೆ, ಈವರೆಗೂ ಕಾದು, ಈಗ ಟೆಂಡರ್ ಕರೆಯಲು ಕಾಲಾವಕಾಶ ಕೇಳುತ್ತಿರುವುದೇಕೆ, ಈ ಹಿಂದಿನ ಏಜೆನ್ಸಿಯ ವಿರುದ್ಧ ಯಾವುದೇ ದೂರುಗಳು ಇಲ್ಲದಿದ್ದರೂ ಗುತ್ತಿಗೆಯನ್ನು ಯಾವ ಕಾರಣಕ್ಕೆ ಮುಂದುವರಿಸಲಾಗಿಲ್ಲ ಎಂಬ ಬಗ್ಗೆ ಉತ್ತರಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.

ಮಹಿಳೆ ಸಾವಿಗೆ ಕೋರ್ಟ್ ಬೇಸರ:

ಅರ್ಜಿದಾರರ ಪರ ವಕೀಲೆ ವಕೀಲೆ ಅನುರಾಧಾ, ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು ರಸ್ತೆ ಗುಂಡಿಯಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕಿಂತ ದಯನೀಯ ಸ್ಥಿತಿ ಇರಲಾರದು ಎಂದು ಬೇಸರ ವ್ಯಕ್ತಪಡಿಸಿದ ಪೀಠ, ಬಿಬಿಎಂಪಿ ಪರ ವಕೀಲರನ್ನು ಕುರಿತು ಮುಂದಿನ ವಿಚಾರಣೆಗೆ ಎಲ್ಲ ರೀತಿಯಲ್ಲೂ ಸಿದ್ಧವಾಗಿರಲು ನಿಮ್ಮ ಅಧಿಕಾರಿಗಳಿಗೆ ತಿಳಿಸಿ. ಅಧಿಕಾರಿಗಳ ವಿರುದ್ಧ ಎಂಥ ಆದೇಶವಾದರೂ ಬರಬಹುದು. ಪ್ರತಿಬಾರಿಯೂ ನಾವು ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿತು.

ನಿಮ್ಮ ವಿಶ್ವಾಸಾರ್ಹತೆ ಗೊತ್ತಿದೆ:

ರಸ್ತೆ ಗುಂಡಿ ಮುಚ್ಚಲು ಆಧುನಿಕ ಯಂತ್ರಗಳನ್ನು ಬಳಸಿದ ದೇಶದ ಮೊದಲ ನಗರ ಬೆಂಗಳೂರು ಆಗಿದೆ ಎಂದು ಪಾಲಿಕೆ ಪರ ವಕೀರಲು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ನಿಮ್ಮ ವಿಶ್ವಾಸಾರ್ಹತೆ ಬಗ್ಗೆ ನಮಗೆ ತಿಳಿದಿದೆ. ನಿಮ್ಮ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಡಿ. ರಸ್ತೆಗುಂಡಿ ಸಮಸ್ಯೆಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆಯಾಗಿ ಹಲವು ವರ್ಷಗಳೇ ಕಳೆದುಹೋಗಿವೆ. ಈವರೆಗೂ ಏಕೆ ಕ್ರಮ ಕೈಗೊಂಡಿಲ್ಲ, ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ. ಹೊಣೆಗಾರಿಕೆ ನಿಗದಿಪಡಿಸಲು ನಾವು ಇಂದು ನಿರ್ಧರಿಸಿದ್ದೆವು. ನ್ಯಾಯಾಲಯ ಪ್ರಕರಣ ಕೈಗೆತ್ತುಕೊಂಡಾಗ ಎಲ್ಲವೂ ನಿಮಗೆ ನೆನಪಾಗುತ್ತದೆ ಎಂದು ಕುಟುಕಿತು.

ಸಾವಿರ ಕೋಟಿ ಮಂಜೂರು:

ಈ ವರ್ಷ ಬಿಬಿಎಂಪಿಗೆ ರಾಜ್ಯ ಸರ್ಕಾರ ಒಂದು ಸಾವಿರ ಕೋಟಿ ರೂ.ಗಳನ್ನು ರಸ್ತೆಗಳ ನಿರ್ವಹಣೆಗೆ ಮಂಜೂರು ಮಾಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಅರ್ಜಿದಾರರ ಪರ ವಕೀಲೆ ಅನುರಾಧಾ ನ್ಯಾಯಪೀಠದ ಗಮನಕ್ಕೆ ತಂದರು. 1 ಸಾವಿರ ಕೋಟಿ ರೂ.ಗಳನ್ನು ಕೇವಲ ದುರಸ್ತಿಗಾಗಿ ನೀಡಲಾಗಿದೆಯೇ, ಈ ಮೊತ್ತದಲ್ಲಿ ಹೊಸ ರಸ್ತೆಗಳನ್ನೇ ನಿರ್ಮಿಸಬಹುದಲ್ಲವೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಪಾಲಿಕೆ ಪರ ವಕೀಲರು ಉತ್ತರಿಸಿ, ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳಿಗೆ ರಸ್ತೆ ಮತ್ತಿತರ ಮೂಲ ಸೌಕರ್ಯ ಕಲ್ಪಿಸಲು ಆ ಹಣ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net