

ಬೆಂಗಳೂರು: ಮನೆಯಲ್ಲಿದ್ದ ಚಿನ್ನವನ್ನು ಕದ್ದು ಪ್ರಿಯಕರನಿಗೆ ನೀಡಿದ್ದ ಚಾಲಾಕಿ ಮಗಳ ವಿರುದ್ಧ ತಾಯಿ ದೂರು ದಾಖಲಿಸಿರುವ ಘಟನೆ ಅಮೃತಹಳ್ಳಿಯ ಜಕ್ಕೂರು ಲೇಔಟ್ನಲ್ಲಿ ನಡೆದಿದೆ.
ದೀಪ್ತಿ (24) ಹಾಗೂ ಮದನ್(27) ಬಂಧಿತ ಜೋಡಿ. ಆರೋಪಿ ದೀಪ್ತಿ ತನ್ನ ಮನೆಯಲ್ಲಿದ್ದ ಚಿನ್ನವನ್ನು ಒಂದೊಂದಾಗೇ ಕದ್ದು ಬರೋಬ್ಬರಿ 1 ಕೆಜಿ ಚಿನ್ನವನ್ನು ಪ್ರಿಯಕರನಿಗೆ ನೀಡಿದ್ದಳು. ಇದಾದ ಬಳಿಕ ಕದ್ದ ಚಿನ್ನವನ್ನು ಪ್ರಿಯಕರನ ಜತೆ ಸೇರಿ ಅಡಮಾನ ಇಟ್ಟು ಹಣ ಪಡೆದುಕೊಂಡಿದ್ದರು. ಇದೀಗ ಪ್ರೇಮಿಗಳಿಬ್ಬರ ಖತರ್ನಾಕ್ ಕೆಲಸ ಬಯಲಾಗಿದ್ದು, ಅಮೃತಹಳ್ಳಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿ ದೀಪ್ತಿಗೆ ಮದುವೆಯಾಗಿ ಡಿವೋರ್ಸ್ ಆಗಿದೆ. ಮನೆಯಲ್ಲಿ ಅಮ್ಮ ಮತ್ತು ಮಗಳು ಮಾತ್ರ ವಾಸಿಸುತ್ತಿದ್ದಾರೆ. ಆರೋಪಿ ಮದನ್ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಮದನ್ ಡ್ರೈವಿಂಗ್ ಶಾಲೆಯೊಂದರಲ್ಲಿ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಶಾಲೆಗೆ ದೀಪ್ತಿ ಡ್ರೈವಿಂಗ್ ಕಲಿಯಲು ಹೋಗಿದ್ದಳು. ಈ ವೇಳೆ ಮದನ್ ಜತೆ ದೀಪ್ತಿಗೆ ಪ್ರೇಮಾಂಕುರವಾಗಿದೆ.
ಪ್ರಿಯತಮನಿಗಾಗಿ ಮನೆಯಲ್ಲಿದ್ದ ತಾಯಿಯ ಒಡವೆ ಎಲ್ಲವನ್ನು ದೀಪ್ತಿ ನೀಡಿದ್ದಳು. ಅದೇ ಜಾಗಕ್ಕೆ ರೋಲ್ಡ್ ಗೋಲ್ಡ್ ಚಿನ್ನ ತಂದು ಇಟ್ಟಿದ್ದಳು. ಚಿನ್ನದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ತಾಯಿ ಮಗಳನ್ನು ಪ್ರಶ್ನಿಸಿದ್ದಳು. ಇದ್ದ ಇಬ್ಬರಲ್ಲಿ ಕದ್ದವರ್ಯಾರು ಅನ್ನೋ ಅನುಮಾನ ತಾಯಿಗೆ ಮೂಡಿತ್ತು. ಮಗಳ ಮೇಲೆಯೇ ಅನುಮಾನಗೊಂಡಿದ್ದ ತಾಯಿ ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಬಳಿಕ ವಿಚಾರಣೆ ವೇಳೆ ದೀಪ್ತಿಯ ಅಮರ ಮಧುರ ಪ್ರೇಮ ಬೆಳಕಿಗೆ ಬಂದಿದೆ.
ಕದ್ದ ಚಿನ್ನವನ್ನು ಮುತ್ತೂಟ್ ಗೋಲ್ಡ್ ಲೋನ್ ಹಾಗೂ ಮಣಪ್ಪುರಂ ಗೋಲ್ಡ್ನಲ್ಲಿ ಅಡಮಾನ ಇಟ್ಟಿದ್ದರು. ಅಡಮಾನ ಇಟ್ಟು ಬಂದ ಹಣದಲ್ಲಿ ಮೋಜು ಮಸ್ತಿ ಮಾಡಿದ್ದರು. ಸದ್ಯ ಕಳುವಾಗಿದ್ದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಮೃತಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್)