ಬೆಳಗಾವಿಯಲ್ಲಿ ಮುಂದುವರಿದ ಎಂಇಎಸ್ ಪುಂಡರ ಅಟ್ಟಹಾಸ: ರಾಯಣ್ಣನ ಪ್ರತಿಮೆ ಭಗ್ನ, 144 ಸೆಕ್ಷನ್ ಜಾರಿ

MES
Published on

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್​) ಯ ಪುಂಡಾಟ ಮುಂದುವರಿದಿದೆ. ಕನ್ನಡ ಧ್ವಜ ಸುಟ್ಟಿದ್ದ ದುಷ್ಕರ್ಮಿಗಳು ಇದೀಗ ಕನ್ನಡ ನಾಡಿನ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನಗೊಳಿಸಿ ಅಟ್ಟಹಾಸ ಮೆರೆದಿದ್ದು, ಬೆಳಗಾವಿಯಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಬಳಿದಿರುವ ಆರೋಪ ಕೇಳಿಬಂದಿದ್ದು, ಇದನ್ನು ಖಂಡಿಸಿ ಬೆಳಗಾವಿಯಲ್ಲಿ ನಿನ್ನೆ ರಾತ್ರಿ ಕಲ್ಲು ತೂರಾಟ ನಡೆಸಲಾಗಿದೆ. 20ಕ್ಕೂ ಹೆಚ್ಚು ಕಾರುಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಕಾರಿನ ಗಾಜುಗಳು ಪುಡಿ ಪುಡಿಯಾಗಿದೆ.

ಇಷ್ಟೇ ಅಲ್ಲದೆ, ರಾತ್ರೋರಾತ್ರಿ ಬೆಳಗಾವಿಯ ಅನಗೊಳದಲ್ಲಿರುವ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಕೈ ಕತ್ತರಿಸಿ ಅಪಮಾನ ಎಸಗಲಾಗಿದೆ. ಬೆಳಗಾವಿಯಲ್ಲಿ ಉದ್ವಿಗ್ನ ವಾತಾವರಣವಿದ್ದು, ನಗರದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಪ್ರಕರಣವನ್ನು ಖಂಡಿಸಿ ಕನ್ನಡಪರ ಹಾಗೂ ಹಿಂದುಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ, ನಾಡದ್ರೊಹಿ ಅಥವಾ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ರಾತ್ರೋರಾತ್ರಿ 5 ರಿಂದ 6 ಜನರು ರಾಯಣ್ಣ ಮೂರ್ತಿ ಭಗ್ನಗೊಳಿಸಿದ್ದಾರೆ. ಮೂರ್ತಿಯು ಅನಗೊಳದ ಕನಕದಾಸ ಕಾಲೋನಿಯಲ್ಲಿದೆ.

ಕನ್ನಡ ನಾಮಫಲಕ್ಕೆ ಕೆಸರಿ ಬಣ್ಣ

ಬೆಳಗಾವಿಯಲ್ಲಿ ನಾಡದ್ರೋಹಿಗಳ ಅಟ್ಟಹಾಸ ಮುಂದುವರಿದಿದ್ದು, ಕನ್ನಡ ನಾಮಫಲಕ್ಕೆ ಕೆಸರಿ ಬಣ್ಣ ಬಳಿದಿದ್ದಾರೆ. ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದ ಸಂಭಾಜಿ ಗಲ್ಲಿಯಲ್ಲಿ ಘಟನೆ ನಡೆದಿದೆ. ಸಂಗೊಳ್ಳಿ ರಾಯಣ್ಣ ಭಾವಚಿತ್ರ ಇರುವ ನಾಮಫಲಕ್ಕೆ ದುಷ್ಕರ್ಮಿಗಳು ಕೇಸರಿ ಬಣ್ಣ ಬಳಿದಿದ್ದಾರೆ.

144 ಸೆಕ್ಷನ್ ಜಾರಿ

ಬೆಳಗಾವಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಬೆಳಗಾವಿ ನಗರದ್ಯಾಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಶನಿವಾರ ಬೆಳಗ್ಗೆ 8 ಗಂಟೆಯಿಂದ ಭಾನುವಾರ ರಾತ್ರಿ ಎಂಟು ಗಂಟೆವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net