ಲಿಂಗಾಯತ ಸಂಪ್ರದಾಯದಂತೆ ಬಾಲಕಿಯ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದ ಮುಸ್ಲಿಂ ಬಾಂಧವರು!

Belagavi Girl
Published on

ಬೆಳಗಾವಿ: ಕಟ್ಟವೊಂದರಲ್ಲಿ ಹೂ ಕೀಳಲು ಹೋಗಿ ಆಯತಪ್ಪಿ ಕೆಳಗಡೆ ಬಿದ್ದು ಮೃತಪಟ್ಟಿದ್ದ ಹಿಂದು ಬಾಲಕಿಯ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮುಸ್ಲಿಂ ಬಾಂಧವರು ಮಾನವೀಯತೆ ಮೆರೆದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ವಿದ್ಯಾಶ್ರೀ ಹೆಗಡೆ (10) ಮೃತಪಟ್ಟ ಬಾಲಕಿ. ಬೆಳಗಾವಿಯ ವೀರಭದ್ರ ನಗರದ ನಿವಾಸಿಯಾಗಿದ್ದ ವಿದ್ಯಾಶ್ರೀ, ನಿನ್ನೆ ಮನೆಯ ಮೇಲ್ಮಹಡಿಯಲ್ಲಿ ಹೂ ಕೀಳಲು ಹೋಗಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಳು. ಈ ವೇಳೆ ಆಕೆಯನ್ನು ರಕ್ಷಿಸಲು ಯಾರು ಮುಂದೆ ಬಾರದಿದ್ದಾಗ ಸ್ಥಳೀಯ ಮುಸ್ಲಿಂ ಮುಖಂಡರು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾಶ್ರೀಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಿಸದೇ ವಿದ್ಯಾಶ್ರೀ ಕೊನೆಯುಸಿರೆಳೆದಳು.

ವಿದ್ಯಾಶ್ರೀ ಅವರ ಪಾಲಕರು ಮೂಲತಃ ಉಡುಪಿಯವರಾಗಿದ್ದು, ಬಹಳ ವರ್ಷಗಳ ಹಿಂದೆಯೇ ಬೆಳಗಾವಿಗೆ ಬಂದು ನೆಲಸಿದೆ. ವಿದ್ಯಾಶ್ರೀ ಮೃತಪಟ್ಟ ಬಳಿಕ ಸ್ಥಳೀಯರು ಹಾಗೂ ಸಂಬಂಧಿಕರು ಅಂತ್ಯಕ್ರಿಯೆಗೆ ಬರದೇ ಇದ್ದಾಗ, ಸ್ವತಃ ಮುಸ್ಲಿಂ ಮುಖಂಡರೇ ಮುಂದೆ ಬಂದು ಲಿಂಗಾಯತ ಸಂಪ್ರದಾಯದಂತೆ ವಿದ್ಯಾಶ್ರೀಯ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಬೆಳಗಾವಿ ಸದಾಶಿವ ನಗರ ಸ್ಮಶಾನದಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದೆ. ಇದಕ್ಕೂ ಮುನ್ನ ಗಂಭೀರ ಗಾಯಗೊಂಡಿದ್ದ ವಿದ್ಯಾಶ್ರೀಯನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಿ, ಆಸ್ಪತ್ರೆಯ ಖರ್ಚನ್ನು ಸಹ ಮುಸ್ಲಿಂ ಬಾಂಧವರೇ ಭರಿಸಿದ್ದಾರೆ. ಮುಸ್ಲಿಂ ಬಾಂಧವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net