

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ವಾಹನ ಬಳ್ಳಾರಿ ನಾಲಾಗೆ ಬಿದ್ದು 8 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಬೆಳಗಾವಿ ತಾಲೂಕಿನ ಕಣಬರಗಿ ಬಳಿಯ ಕಲ್ಯಾಳ ಪುಲ್ ಬಳಿ ಭಾನುವಾರ (ಜೂನ್ 26) ನಡೆದಿದೆ.
ಕ್ರೂಸರ್ ವಾಹನ ಗೋಕಾಕ್ ತಾಲೂಕಿನ ಅಕ್ಕತಂಗಿಯರ ಹಾಳದಿಂದ ಬೆಳಗಾವಿ ಕಡೆಗೆ ಬರುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲಾಗೆ ಬಿದ್ದು ಅವಘಡ ಸಂಭವಿಸಿದೆ. ದಿನಗೂಲಿ ಕೆಲಸಕ್ಕೆಂದು ಬೆಳಗಾವಿಗೆ ಬರುತ್ತಿದ್ದಾಗ ದುರಂತ ಘಟಿಸಿದೆ. ಮೂರು ಜನರಿಗೆ ಗಂಭೀರವಾಗಿ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರನ್ನು ಬಸನು ಹನಮನ್ನವರ, ಫಕೀರಪ್ಪ ಕಳಸನ್ನವರ, ಅಡಿವೆಪ್ಪ ಚಿಲಬಾವಿ, ಕರೆಪ್ಪ ರಾಮಣ್ಣ ಗಸ್ತಿ, ಬಸವರಾಜ ಚಂದ್ರಪ್ಪ ದಳವಿ, ದಾಸನಟ್ಟಿ ಗ್ರಾಮದ ಕೃಷ್ಣಾ ಕಂಡೂರಿ ಎಂದು ಗುರುತಿಸಲಾಗಿದೆ. ಮೃತರೆಲ್ಲರು ಗೋಕಾಕ ತಾಲೂಕಿನ ಅಕ್ಕ ತಂಗಿರಹಾಳ ಗ್ರಾಮದ ಕಾರ್ಮಿಕರು. ರೈಲ್ವೆ ಡಬಲ್ ಟ್ರ್ಯಾಕ್ ಹಳಿ ಕೆಲಸಕ್ಕೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಸ್ಥಳಕ್ಕೆ ಮಾರಿಹಾಳ ಠಾಣಾ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತರ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಇದಲ್ಲದೆ, ಸ್ಥಳಕ್ಕೆ ಬೆಳಗಾವಿ ಕಮಿಷನರ್ ಡಾ. ಎಂ.ಬಿ.ಬೋರಲಿಂಗಯ್ಯ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆಯುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)