ನಾಳೆ ಸಂಜೆ ಬೊಮ್ಮಾಯಿ‌ ದೆಹಲಿಗೆ ದೌಡು: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರ ಭೇಟಿ

Bommai
Published on

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಸವರಾಜ ಬೊಮ್ಮಾಯಿ‌ ಮೂರನೇ ಬಾರಿ ದೆಹಲಿಗೆ ಪ್ರಯಾಣ ಬೆಳೆಸಲು ಸಜ್ಜಾಗಿದ್ದು, ಬುಧವಾರ ಸಂಜೆ ತೆರಳಲಿದ್ದಾರೆ.

ಸುದ್ದಿಗಾರರ ಜತೆಗೆ ಮಂಗಳವಾರ ಮಾತನಾಡಿದ ಅವರು, ಕೇಂದ್ರದ ಆರೋಗ್ಯ, ಹಣಕಾಸು, ರಕ್ಷಣೆ, ಜಲಶಕ್ತಿ ಸಚಿವರನ್ನು ಗುರುವಾರ ಭೇಟಿಯಾಗಿ ಚರ್ಚಿಸಲೆಂದು ಬುಧವಾರ ಸಂಜೆ ದೆಹಲಿಗೆ ಹೊರಟಿರುವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ, ರಾಜಕೀಯ ವಿಷಯ ಸೇರಿದಂತೆ ಖಾಲಿಯಿರುವ ನಾಲ್ಕು ಸ್ಥಾನಗಳ ಭರ್ತಿ ಕುರಿತು ಮಾತುಕತೆ ನಡೆಸುವ ಚಿಂತನೆಯಿದೆ ಎಂದರು.

ಕಾನೂನು ತಂಡದ ಸಭೆ

ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕಾನೂನು ತಂಡದ ಸಭೆ ನಡೆಸಿ, ಸದ್ಯದ ಬೆಳವಣಿಗೆ ಹಾಗೂ ಮುಂದಿನ ನಡೆಯ ಕುರಿತು ಸಮಾಲೋಚನೆಗೆ ನಿರ್ಧರಿಸಿರುವೆ ಎಂದು ಹೇಳಿದರು.

ನೀರಾವರಿ ಯೋಜನೆಗಳಿಗಾಗಿ ಜೆಡಿಎಸ್ ಪಾದಯಾತ್ರೆ ಹಮ್ಮಿಕೊಂಡಿರುವ ಪಾದಯಾತ್ರೆ ಬಗ್ಗೆ ಏನನ್ನೂ ಹೇಳಲಾರೆ. ಅವರ ಪಕ್ಷದ ಕಾರ್ಯಕ್ರಮ ರೂಪಿಸುವುದಕ್ಕೆ ಅವರು ಸ್ವತಂತ್ರರು. ಆದರೆ, ರಾಜ್ಯದ ನೆಲ-ಜಲ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಿದ ನಿದರ್ಶನಗಳಿದ್ದು, ಮುಂದೆಯೂ ಇದೇ ನಿಲುವು ಮುಂದುವರಿಯಲಿದೆ ಎಂಬ ವಿಶ್ವಾಸವನ್ನು ಬೊಮ್ಮಾಯಿ‌ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net