

ಬಾಗಲಕೋಟೆ: ಬೀಳಗಿ ತಾಲೂಕಿನ ಬಾಡಗಂಡಿ ಬಳಿ ರಾಷ್ಟ್ರೀಯ ಹೆದ್ದಾರಿ 218ರ ರಸ್ತೆಯಲ್ಲಿ ಕ್ಯಾಂಟರ್ ಪಂಚರ್ ತಿದ್ದಿಸಲು ನಿಂತ ಪ್ರಯಾಣಿಕರ ಮೇಲೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವಿಗೀಡಾದ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.
ಮೃತರಲ್ಲಿ ರಜಾಕ್ ಹಾಗೂ ರಾಮಸ್ವಾಮಿ ಎಂಬುವವರು ಬೀಳಗಿ ತಾಲೂಕಿನ ಗೋವಿನದಿನ್ನಿ ಗ್ರಾಮದವರಾಗಿದ್ದು, ನಾಶಿರ್ ಮುಲ್ಲಾ, ಮಲ್ಲಪ್ಪ ಮಳಲಿ ಬೀಳಗಿ ಪಟ್ಟಣದವರಾಗಿದ್ದು ಸರಿಸುಮಾರು 38-40 ಆಸುಪಾಸಿನ ವಯೋಮಾನದವರು. ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕ್ಯಾಂಟರ್ನಲ್ಲಿ ಈರುಳ್ಳಿ ತುಂಬಿಕೊಂಡು ಬೆಂಗಳೂರಿಗೆ ಮಾರಾಟ ಮಾಡಲು ಹೊರಟಿದ್ದರು. ವಿಜಯಪುರ ಜಿಲ್ಲೆ ಕಾರಜೋಳ ಗ್ರಾಮದಿಂದ ಕ್ಯಾಂಟರ್ ಬೆಂಗಳೂರಗೆ ಹೊರಟಿತ್ತು. ಬೀಳಗಿ ತಾಲೂಕಿನ ಬಾಡಗಂಡಿ ಬಳಿ ವಾಹನ ಪಂಚರ್ ಆಗಿದೆ. ಬಳಿಕ ಚಾಲಕ ನಾಶೀರ್ ಮುಲ್ಲಾ ವಾಹನ ಮಾಲೀಕ ಮಲ್ಲಪ್ಪ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾನೆ. ಬೀಳಗಿ ಪಟ್ಟಣದಿಂದ ರಾಮಸ್ವಾಮಿ ಎನ್ನುವ ವ್ಯಕ್ತಿಯ ಟಂಟಂನಲ್ಲಿ ಟೈರ್ ಹಾಕಿಕೊಂಡು ಪಂಚರ್ ಆಗಿದ್ದ ಸ್ಥಳಕ್ಕೆ ಒಟ್ಟು ಐವರು ತೆರಳಿದ್ದರು.
ಒಬ್ಬ ಸ್ಟೇಪ್ನಿ ಹತ್ತಿರ ಕೆಲಸ ಮಾಡ್ತಿದ್ದು, ಉಳಿದ ನಾಲ್ವರು ವಾಹನ ಪಕ್ಕ ನಿಂತಿದ್ರು. ಈ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೆ ದುರ್ಮರಣ ಹೊಂದಿದ್ದಾರೆ. ಬೀಳಗಿ ಆಸ್ಪತ್ರೆಯಲ್ಲಿ ನಾಲ್ವರ ಶವ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ. ಆಸ್ಪತ್ರೆ ಆವರಣದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.