

ಬಾಗಲಕೋಟೆ: ಜೂನ್ 21 ರಂದು ಪಟ್ಟದಕಲ್ಲಿನಲ್ಲಿ ನಡೆಯುವ ಯೋಗ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಕೇಳದೇ ಹೆಸರು ಹಾಕಿದ್ದಕ್ಕೆ ಗರಂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆ ಡಿಸಿ ಸುನೀಲಕುಮಾರ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.
ಕರೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಿನಗೆ ಶಿಷ್ಟಾಚಾರ ಅಂದ್ರೆ ಏನು ಎಂಬುದು ಗೊತ್ತಿಲ್ವಾ? ನೀನು ಮೊದಲು ಶಿಷ್ಟಾಚಾರವನ್ನು ಪಾಲಿಸಬೇಕು. ಅವನ್ಯಾರೋ ಸಚಿವ ಬರ್ತಾನೆ ಅಂತಾ ನೀನು ಆಮಂತ್ರಣ ಪತ್ರಿಕೆ ಮಾಡಿ ಕಳುಹಿಸಿಬಿಟ್ಟರೆ ಏನು ಅರ್ಥ. ನೀನು ಡಿಸಿಯಾದರೆ, ನಾನು ಈ ಕ್ಷೇತ್ರದ ಶಾಸಕ. ನೀನೊಬ್ಬ ಸೇವಕ. ನಿನ್ನ ಜವಾಬ್ದಾರಿಯನ್ನು ತಿಳಿದುಕೊಳ್ಳಬೇಕು ಎಂದು ಏಕವಚನದಲ್ಲೇ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು.
ಆಮತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕುವ ಮುನ್ನ ನನ್ನನ್ನು ಸಂಪರ್ಕಿಸಬೇಕು ಎಂಬುದು ತಿಳಿದಿರಲಿಲ್ಲವಾ? ಕ್ಷೇತ್ರದ ಜನರಿಗೆ ಇದು ಯಾವ ಸಂದೇಶ ಹೋಗುತ್ತದೆ?ನಿಮಗೆಲ್ಲ ಯಾರ್ರಿ ಕೆಲಸ ಕೊಟ್ಟವನು. ಇನ್ನೊಂದಿ ಸಾರಿ ಹೀಗಾದ್ರೆ ಸುಮ್ಮನೆ ನಾನು ಸುಮ್ಮನೇ ಬಿಡುವುದಿಲ್ಲ. ವಿಧಾನ ಸಭೆಯಲ್ಲಿ ಧ್ವನಿ ಎತ್ತುತ್ತೇನೆ. ಅಸೆಂಬ್ಲಿಗಿಂತ ಮೊದಲು ನೀನು ನನ್ನ ಕಾಣಬೇಕು ಎಂದು ಡಿಸಿಗೆ ಎಚ್ಚರಿಕೆ ನೀಡಿದರು.
ಫೋನ್ ಇಟ್ಟ ಬಳಿಕ ಆಪ್ತರ ಬಳಿಯೂ ಡಿಸಿ ವಿರುದ್ಧ ಗರಂ ಆದ ಸಿದ್ದರಾಮಯ್ಯ, ಅಧಿಕಾರಿಗಳೆಲ್ಲ ಕೊಬ್ಬಿ ಹೋಗಿದ್ದಾರೆ. ಅವನ್ಯಾವನೋ ಚಂದ್ರಶೇಖರ(ಕೇಂದ್ರ ಸಚಿವ) ಅಂತ ಬರ್ತಾವ್ನೆ. ಅವನಿಗೂ ಈ ಕ್ಷೇತ್ರಕ್ಕೂ ಸಂಬಂಧವೇ ಇಲ್ಲ. ಅವನು ಬಂದು ಯೋಗಾ ದಿನದಲ್ಲಿ ಭಾಗವಹಿಸ್ತಾನೆ. ನಾನು ಆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಇದನ್ನು ನೋಡಿ ಜನ ಏನಂತ ತಿಳಿದುಕೊಳ್ತಾರೆ? ಈ ಬಗ್ಗೆ ನಾನು ಅಧಿವೇಶನದಲ್ಲಿ ಚರ್ಚೆ ಮಾಡ್ತೇನೆ ಎಂದರು.
ಡಿಸಿ ಅಂದ್ರೆ ಅವನೇನು ಆಕಾಶದವನ. ಅವನು ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಅಷ್ಟೆ. ಹುಡುಗಾಟ ಆಗಿ ಬಿಟ್ಟಿದೆ ಅವರಿಗೆ. ಕಲೆಕ್ಟರ್, ತಹಸೀಲ್ದಾರ್ ಅವೆಲ್ಲ ಬ್ರಿಟಿಷರ ಕಾಲಕ್ಕೆ ಹೊರಟೋಯ್ತು. ಕುದುರೆ ಮೇಲೆ ಬರೋಕೆ, ಹೋಗೋಕೆ ಇದೇ ಬ್ರಿಟಿಷ್ ಕಾಲವಲ್ಲ. ಅವನೊಬ್ಬ ಸಾರ್ವಜನಿಕ ಸೇವಕನಷ್ಟೇ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು. (ದಿಗ್ವಿಜಯ ನ್ಯೂಸ್)