

ಜಗತ್ಸಿಂಗ್ಪುರ್: ಒಡಿಶಾದ ತಿರ್ತೊಲ್ ಶಾಸಕ ಬಿಜಯ್ ಶಂಕರ್ ದಾಸ್ ವಿರುದ್ಧ ವಂಚನೆ ಆರೋಪದ ಅಡಿಯಲ್ಲಿ ಪ್ರಿಯತಮೆ ಹಾಗೂ ಭಾವಿ ಪತ್ನಿ ಸೋಮಾಲಿಕಾ ದೂರು ದಾಖಲಿಸಿದ್ದಾರೆ.
ಬಿಜಯ್ ಮತ್ತು ಸೋಮಾಲಿಕಾ ನಡುವೆ ಶುಕ್ರವಾರ ಮದುವೆ ನಿಗದಿಯಾಗಿತ್ತು. ರಿಜಿಸ್ಟರ್ ಮದುವೆ ಮಾಡಿಕೊಳ್ಳಲು ಇಬ್ಬರು ಒಪ್ಪಿದ್ದರು. ಅದರಂತೆ ಎಲ್ಲಾ ತಯಾರಿ ಮಾಡಿಕೊಂಡು ಸೋಮಾಲಿಕಾ ವಿವಾಹ ನೋಂದಣಿ ಕಚೇರಿ ಮುಂದೆ ಕಾಯುತ್ತಿದ್ದರು. ಆದರೆ, ಬಿಜಯ್ ಮಾತ್ರ ಎಷ್ಟೇ ಸಮಯವಾದರೂ ಬರಲೇ ಇಲ್ಲ. ಹೀಗಾಗಿ ವಂಚನೆ ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಮದುವೆ ಮಾಡಿಕೊಳ್ಳಲು ಮೇ 17ರಂದೇ ಬಿಜಯ್ ಮತ್ತು ಸೋಮಾಲಿಯಾ ಜಗತ್ಸಿಂಗ್ಪುರದಲ್ಲಿರುವ ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ದಿನಾಂಕ ನಿಗದಿಯಾದ ಪ್ರಕಾರ ಜೂನ್ 17ರಂದು ಕೋರ್ಟ್ ಮುಂದೆ ಇಬ್ಬರು ಹಾಜರಾಗಬೇಕಿತ್ತು. ಸರಿಯಾದ ಸಮಯಕ್ಕೆ ಸೋಮಾಲಿಕಾ ಹಾಜರಾದರೆ, ಬಿಜಯ್ ಮಾತ್ರ ಬರಲೇ ಇಲ್ಲ.
ರಿಜಿಸ್ಟ್ರಾರ್ ಕಚೇರಿ ಬಳಿ ಬರುವಂತೆ ಗುರುವಾರವೇ ನಾನು ಮತ್ತು ನನ್ನ ಪಾಲಕರು ಬಿಜಯ್ ಅವರನ್ನು ಸಂಪರ್ಕಿಸಿ ತಿಳಿಸಿದ್ದೆವು. ಆದರೆ, ಶುಕ್ರವಾರ ಆತ ಬರಲೇ ಇಲ್ಲ. ಮತ್ತೊಬ್ಬಳ ಜತೆ ಸಂಬಂಧ ಹೊಂದಿರಬಹುದು ಎಂಬ ಗುಮಾನಿ ಶುರುವಾಗಿದೆ. ಅದಕ್ಕಾಗಿಯೇ ಆತ ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾನೆ. ನಾನು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸೋಮಾಲಿಕಾ ಎಚ್ಚರಿಕೆ ನೀಡಿದ್ದಾರೆ.
ವರದಿಗಳ ಪ್ರಕಾರ, ಶಾಸಕ ಬಿಜಯ್ ಮತ್ತು ಸೊಮಾಲಿಕಾ ನಡುವೆ ಎಸ್ವಿಎಂ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಪರಸ್ಪರ ಪರಿಚಯವಿತ್ತು ಮತ್ತು ಪ್ರೇಮಾಂಕುರವು ಆಗಿತ್ತು. ಅಲ್ಲದೆ, ದೈಹಿಕ ಸಂಬಂಧವು ಇಬ್ಬರ ನಡುವೆ ಇತ್ತು ಎಂದು ತಿಳಿದುಬಂದಿದೆ.
ಆರಂಭದಲ್ಲಿ ಚೆನ್ನಾಗಿಯೇ ಇದ್ದ ಇಬ್ಬರ ಸಂಬಂಧ ನಂತರದ ದಿನಗಳಲ್ಲಿ ವೈಮನಸ್ಸಿನಿಂದಾಗಿ ಬಿರುಕು ಮೂಡಲು ಆರಂಭಿಸಿತು. ಕಳೆದ ಪಂಚಾಯತ್ ಚುನಾವಣೆಯ ಸಮಯದಲ್ಲಿ ಸೋಮಾಲಿಕಾ ತನ್ನ ವೈಯಕ್ತಿಕ ವೀಡಿಯೊವನ್ನು ಸಾರ್ವಜನಿಕಗೊಳಿಸಿದರು. ಈ ಬಗ್ಗೆ ಎಸ್ಪಿ ಅವರನ್ನೂ ಸಂಪರ್ಕಿಸಿದ್ದರು. ಇದಾದ ಬಳಿಕ ಇಬ್ಬರನ್ನು ಕರೆಸಿ, ಸಂಧಾನ ಮಾಡಿದ್ದರು. ಈ ವೇಳೆ ರಿಜಿಸ್ಟ್ರರ್ ಮದುವೆಗೆ ಬಿಜಯ್ ಒಪ್ಪಿಕೊಂಡಿದ್ದ. ಆದರೆ, ಬಿಜಯ್ ಇದೀಗ ಮದುವೆಗೂ ಬಂದಿಲ್ಲ ಮತ್ತು ಸ್ಪಷ್ಟನೆ ನೀಡಲು ತಯಾರಿಲ್ಲದಿರುವುದು ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. (ಏಜೆನ್ಸೀಸ್)